

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಎದುರಾಗಿರುವ ಸಂಕಷ್ಟಗಳು ಪರಿಹಾರವಾಗಲಿ ಎಂದು ಅವರ ಅಭಿಮಾನಿಗಳು ಚಾಮುಂಡಿಬೆಟ್ಟದ ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಏರಿ 101 ಈಡುಗಾಯಿ ಒಡೆದರು.
ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಮೆಟ್ಟಿಲುಗಳನ್ನು ಏರಿದರು. ನಂತರ ಮಾತನಾಡಿದ ಲೋಕೇಶ್ ಪಿಯಾ, ಸಿದ್ದರಾಮಯ್ಯ ಎಂದು ಸಹ ಸ್ವಾರ್ಥ ರಾಜಕಾರಣ ಮಾಡಿದವರಲ್ಲ. ಸದಾ ಸಮಾಜಮುಖಿ ಚಿಂತನೆಯೊಂದಿಗೆ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ, ಅವರ ವಿರುದ್ಧ ರಾಜಕೀಯ ಷಡ್ಯಂತ್ರ ರೂಪಿಸಿ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಇದೀಗ ಎದುರಾಗಿರುವ ಸಂಕಷ್ಟಗಳು ಪರಿಹಾರವಾಗುವ ವಿಶ್ವಾಸವಿದೆ ಎಂದರು.
ಮುಡಾದಲ್ಲಿ ಸಿದ್ದರಾಮಯ್ಯ ಕುಟುಂಬದಿಂದ ಯಾವುದೇ ಅಕ್ರಮಗಳು ನಡೆದಿಲ್ಲ. ಈ ವಿಚಾರದ ಕುರಿತು ಮಾಜಿ ಆಯುಕ್ತ ನಟೇಶ್ ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆ ಸರಿಯಾಗಿದೆ. ಸಿದ್ದರಾಮಯ್ಯ ಎಲ್ಲ ಆರೋಪಗಳಿಂದ ಮುಕ್ತರಾಗುವುದು ನಿಶ್ಚಿತ ಎಂದರು.