

ಮೈಸೂರು: ರಾಜ್ಯ ಸರ್ಕಾರ ಬಿಟ್ಟಿಭಾಗ್ಯಗಳನ್ನು ಜಾರಿಗೊಳಿಸಿ ಒಂದು ಕಡೆಯಿಂದ ಕಸಿದು ಮೊತ್ತೊಂದೆಡೆ ನೀಡುತ್ತಿದೆ. ಯುವಜನರಿಗೆ ಯುವ ನಿಧಿ ಸರಿಯಾಗಿ ನೀಡದೆ ಚೊಂಬು ನೀಡಿದೆ. ವಿವಿಧ ನಿಗಮಗಳಿಗೆ ನೀಡುತ್ತಿದ್ದ ಅನುದಾನ ಕಡಿತ ಮಾಡಿ ಆ ಹಣವನ್ನು ಬಿಟ್ಟಿ ಭಾಗ್ಯಕ್ಕೆ ಬಳಕೆ ಮಾಡುವ ಮೂಲಕ ಸಣ್ಣ ಸಮುದಾಯಗಳಿಗೆ ಸರ್ಕಾರ ಚೊಂಬು ನೀಡಿದೆ. ರಾಜ್ಯ ಸರ್ಕಾರ ನೀಡುವ 2 ಸಾವಿರ ರೂ.ಗಳಲ್ಲಿ ಸಂಸಾರ ನಡೆಸಲು ಸಾಧ್ಯವೇ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕ ಸಮುದಾಯಗಳ ಸಮಾವೇಶದಲ್ಲಿ ಮಾತನಾಡಿ, ಹಿಂದುಳಿದ ವರ್ಗದವರು ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಹಿಡಿಯದೆ ಹೋಗಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಈ ಚುನಾವಣೆಯಲ್ಲಿ ಹಿಂದುಳಿದ ವರ್ಗದವರು ಸಿದ್ದರಾಮಯ್ಯ ಅವರಿಗೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಯಾರು ಇಂದು ಹಿಂದುಳಿದ ವರ್ಗದವರ ಹೆಸರನ್ನು ಹೇಳುತ್ತಿದ್ದಾರೋ ಅವರು ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಪ್ರತಿಮೆ ನಿರ್ಮಿಸುವ ಸೌಜನ್ಯ ತೋರಲಿಲ್ಲ. ಆದರೆ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಮುಂದೆ ಡಿ.ದೇವರಾಜ ಅರಸು ಪ್ರತಿಮೆ ನಿರ್ಮಾಣಕ್ಕೆ 92 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.