ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ

23 Dwd 2 Pralhad Joshi
Published on

ಹುಬ್ಬಳ್ಳಿ : ಆರ್​ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ 11 ಜನ ಅಮಾಯಕರು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಲ್ತುಳಿತದಲ್ಲಿ ಜನರು ಸಾಯುತ್ತಿದ್ದರೂ ಸಂಭ್ರಮಾಚರಣೆ ಮುಂದುವರೆದಿತ್ತು. ಆದರೆ, ಮುಖ್ಯಮಂತ್ರಿ ಅವರು ನನಗೆ ಈ ಘಟನೆಯ ಮಾಹಿತಿ ಇರಲಿಲ್ಲವೆಂದು ಹೇಳಿದ್ದಾರೆ. ಹಾಗಾದರೆ, ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ? ಸಂಭ್ರಮಾಚರಣೆಯಲ್ಲಿನ ಅವಘಡದ ಮಾಹಿತಿಯನ್ನು ಗುಪ್ತಚರ ಇಲಾಖೆ ಮುಖ್ಯಮಂತ್ರಿಯವರಿಗೆ ನೀಡಲಿಲ್ಲವೇ ? ಅಥವಾ ಗುಪ್ತಚರ ಇಲಾಖೆಗೇ ಅವಘಡದ ಮಾಹಿತಿ ಇರಲಿಲ್ಲವೇ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಕಾರ್ಯಕರ್ತರಂತಿರುವ ಪೊಲೀಸ್ ಅಧಿಕಾರಿ ನಿಂಬಾಳಕರ ಅವರು ಅವಘಡದ ಮಾಹಿತಿಯನ್ನು ಮುಖ್ಯಮಂತ್ರಿ ಅವರಿಗೆ ನೀಡಲಿಲ್ಲವೇ ? ಈಗ ಜನರಿಗೆ ಮಂಕುಬೂದಿ ಎರಚುವ ಉದ್ದೇಶದಿಂದ ಪೊಲೀಸ್ ಅಧಿಕಾರಿ ನಿಂಬಾಳಕರ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿದ್ದಾರೆ. ತಮ್ಮ ರಾಜಕೀಯ ಕಾರ್ಯದರ್ಶಿಯನ್ನೂ ದೂರ ಇಟ್ಟಿದ್ದಾರೆ. ಕೆಲ ದಿನಗಳ ನಂತರ ಅವರಿಗೆ ಮೊದಲಿನ ಸ್ಥಾನಮಾನವನ್ನು ನೀಡುತ್ತಾರೆ ಎಂದು ದೂರಿದರು.

ಆರ್​ಸಿಬಿ ತಂಡವನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗುವ ಅವಶ್ಯಕತೆ ಹಾಗೂ ಕಪ್​ಗೆ ಮುತ್ತಿಡುವ ಅಗತ್ಯತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಏನಿತ್ತು ? ತಮ್ಮ ಒಣ ಪ್ರತಿಷ್ಠೆಗಾಗಿ ಪೊಲೀಸ್ ಇಲಾಖೆಯ ಮುನ್ನೆಚ್ಚರಿಕೆಯನ್ನು ಗಾಳಿಗೆ ತೂರಿ ಸರ್ಕಾರ ಸಂಭ್ರಮಾಚರಣೆ ಆಯೋಜಿಸಿತ್ತು ಎಂದು ದೂರಿದರು.

ಬೇಗಾನೆ ಶಾದಿ ಮೆ ಅಬ್ದುಲ್ಲಾ ದಿವಾನಾ ಎಂಬ ಉರ್ದು ಗಾದೆಮಾತಿನಂತೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಅಬ್ದುಲ್ಲಾನಂತೆ ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ಕಾಣಿಸಿಕೊಂಡರು ಎಂದು ವ್ಯಂಗ್ಯವಾಡಿದರು.

ಪ್ರಯಾಗರಾಜ್ ಕಾಲ್ತುಳಿತಕ್ಕೆ ಹಾಗೂ ಪೆಹಲ್ಗಾಮ್ ಭಯೋತ್ಪಾದಕರ ದಾಳಿಗೆ ಆರ್​ಸಿಬಿ ಸಂಭ್ರಮಾಚರಣೆಯ ಕಾಲ್ತುಳಿತವನ್ನು ಕಾಂಗ್ರೆಸ್ ಮುಖಂಡರು ಹಾಗೂ ಕೆಲ ಬುದ್ಧಿ ಜೀವಿಗಳು ಹೋಲಿಸುತ್ತಿದ್ದಾರೆ. ಪ್ರಯಾಗರಾಜ್​ಗಾಗಿ ಉತ್ತರ ಪ್ರದೇಶದ ಸರ್ಕಾರ ಹಲವಾರು ತಿಂಗಳುಗಳಿಂದಲೇ ಅಗತ್ಯ ಕ್ರಮ ತೆಗೆದುಕೊಂಡಿತ್ತು. ಎರಡೂ ಘಟನೆಗಳಲ್ಲಿನ ಘಟನೆಗಳು ಒಂದು ಆಕ್ಸಿಡೆಂಟ್ ಇದ್ದಂತೆ. ಆದರೆ, ಆರ್​ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟಿರುವುದು ಸರ್ಕಾರದ ಒಣ ಪ್ರತಿಷ್ಠೆಗೆ ಎಂದು ಆರೋಪಿಸಿದರು.

ಆರ್​ಸಿಬಿ ಸಂಭ್ರಮಾಚರಣೆಗೆ ಸಧ್ಯಕ್ಕೆ ಅವಕಾಶ ನೀಡುವುದು ಬೇಡವೆಂದು ಬೆಂಗಳೂರು ಪೊಲೀಸ್ ಆಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದರೋ ಅಥವಾ ಇಲ್ಲವೋ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ನಿರ್ವಹಣೆಯಲ್ಲಿ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳು ಸಂಪೂರ್ಣ ವೈಫಲ್ಯಕಂಡಿವೆ. ಕೊಲೆ, ಹಿಂಸಾಚಾರ ಹೆಚ್ಚಾಗಿವೆ. ಅಭಿವೃದ್ಧಿ ತಟಸ್ಥಗೊಂಡಿದೆ. ಇದೊಂದು ಶೂನ್ಯ ಆಡಳಿತದ ಸರ್ಕಾರ. ಸರ್ಕಾರ ತನ್ನ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜರಿದರು.

ದಕ್ಷಿಣ ಕನ್ನಡ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪೊಲೀಸ್ ಅಧಿಕಾರಿಗಳು ದೌರ್ಜನ್ಯ ತೋರುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸತಾಗಿ ಅಧಿಕಾರ ವಹಿಸಿಕೊಂಡಿರುವ ಎಸ್​ಪಿ, ಕಾಂಗ್ರೆಸ್ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ. ಮುಂದೆ ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಇದೆ ಎಂಬುದನ್ನು ಅಲ್ಲಿನ ಎಸ್​ಪಿ ಮರೆಯಬಾರದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್​ಗಾಗಿ ದೇಶವನ್ನು ಮಾರಲೂ ಹೇಸುವುದಿಲ್ಲ. ಆಪರೇಶನ್ ಸಿಂಧೂರ ಅನ್ನು ಹೊಗಳಿದ್ದಕ್ಕೆ ಕಾಂಗ್ರೆಸ್ ಮುಖಂಡರು ಶಶಿ ತರೂರ್ ಅವರನ್ನೇ ದ್ವೇಷಿಸುತ್ತಿದ್ದಾರೆ ಎಂದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷಗಳು ಗತಿಸಿದವು. ಈ ಅವಧಿಯಲ್ಲಿ ಭಯೋತ್ಪಾದನಾ ದಾಳಿಗಳು ಬಹುತೇಕ ಕಡಿಮೆಯಾಗಿವೆ. ದೇಶದಲ್ಲಿ ಬಡತನ ಬಹುತೇಕ ಇಳಿದಿದೆ. ವಿಶ್ವಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ಕಡುಬಡತನ ಶೇ. 21 ರಿಂದ ಶೇ. 5.3ಕ್ಕೆ ಇಳಿದಿದೆ. 26.09 ಕೋಟಿ ಜನರು ಕಡುಬಡತನದಿಂದ ಹೊರಗೆ ಬಂದಿದ್ದಾರೆ ಎಂದು ಹೇಳಿದರು.

ಆದರೆ, ಇವೆಲ್ಲಕಾಂಗ್ರೆಸ್ ಸರ್ಕಾರದ ಕಣ್ಣಿಗೆ ಕಾಣುವುದಿಲ್ಲ. ಅವರದ್ದು ಏನೇ ಇದ್ದರು ಪ್ರಧಾನಿ ಮೋದಿ ಅವರನ್ನು ಹಿಯಾಳಿಸುವುದು. ಟ್ರಪ್, ಪುಟಿನ್​ಗೆ ಸಲಹೆ ನೀಡುವುದು ಎಂದು ಸಚಿವ ಸಂತೋಷ ಲಾಡ್ ಅವರ ಹೆಸರು ಹೇಳದೆ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net