

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ, ತನಿಖೆ ಎದುರಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಗ್ರಹಿಸಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕುಟುಂಬವೇ ನೇರ ಫಲಾನುಭವಿಯಾಗಿದೆ. ಇಡೀ ಪ್ರಕರಣ 5 ಸಾವಿರ ಕೋಟಿ ರೂ.ಮೊತ್ತದ ಹಗರಣ. ಲೋಕಾಯುಕ್ತದಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ. ಇದಕ್ಕಾಗಿ ಸ್ವತಂತ್ರೃವಾಗಿ ತನಿಖೆಯಾಗಬೇಕು. ಅದಕ್ಕಾಗಿ ಈ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಮೊದಲಿನಿಂದಲೂ ಒತ್ತಾಯಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿ ರಾಷ್ಟ್ರಪತಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು.
3 ಸಲ ದಾಖಲೆ ನೀಡಿಲ್ಲ. ಹೀಗಾಗಿಯೇ, ಜಾರಿನಿರ್ದೇಶನಾಲಯ(ಇಡಿ) ಅಧಿಕಾರಿಗಳು ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಈ ವಿಷಯದಲ್ಲಿ ನ್ಯಾಯ ದೊರೆಯುವವರೆಗೂ ನಿರಂತರವಾಗಿ ಹೋರಾಟ ನಡೆಸಿ ಮುಡಾ ಉಳಿಸುವ ಕೆಲಸ ಮಾಡಲಾಗುವುದು ಎಂದರು.
ಸಿಎಂ ಕುಟುಂಬಕ್ಕೆ ಹಂಚಿಕೆ ಆಗಿರುವ 14 ನಿವೇಶನವಷ್ಟೇ ಅಲ್ಲ, ಮುಡಾದಿಂದ ಕಾನೂನು ಬಾಹಿರವಾಗಿ ಹಂಚಿಕೆ ಆಗಿರುವ ಎಲ್ಲ ನಿವೇಶನ, ಅಕ್ರಮಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.
ಮೈಸೂರಿನ ರೈಲ್ವೆ ಗೂಡ್ಸ್ ಶೆಡ್ ಅನ್ನು ಮಂಡ್ಯದ ಯಲಿಯೂರಿಗೆ ಸ್ಥಳಾಂತರಿಸುವ ಕುರಿತು ನನಗೆ ಗೊತ್ತಿಲ್ಲ. ಮಾಹಿತಿ ತಿಳಿದುಕೊಂಡು ಪ್ರತಿಕ್ರಿಯೆಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ವಿಮಾನನಿಲ್ದಾಣದ ರನ್ ವೇ ವಿಸ್ತರಣೆ ಕುರಿತು ಪ್ರಯತ್ನಗಳು ನಡೆದಿವೆ. ಇದು ಪೂರ್ಣಗೊಂಡ ಬಳಿಕ ಬೃಹತ್ ವಿಮಾನಗಳ ಹಾರಾಟಕ್ಕೆ ಅವಕಾಶ ದೊರೆಯಲಿದೆ. ಜತೆಗೆ, ಮೈಸೂರಿನಿಂದ ಗೋವಾ ಮತ್ತು ಕೇರಳದ ಕೊಚ್ಚಿನ್‌ಗೆ ವಿಮಾನ ಸಂಪರ್ಕ ಕಲ್ಪಿಸಲು ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.