ಗ್ಯಾರಂಟಿಗೆ ಎಸ್ಸಿ ಎಸ್ಟಿ ಹಣ, ಅನ್ಯಾಯದ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ನೀಡಲಿ

IMG-20250306-WA0037.jpg
Published on

ಚಿಕ್ಕಬಳ್ಳಾಪುರ: ಗ್ಯಾರಂಟಿ ಯೋಜನೆಗಳ ಜಾರಿ ಹೆಸರಿನಲ್ಲಿ ಶೋಷಿತ ವರ್ಗಕ್ಕೆ ಅನ್ಯಾಯವೆಸಗುತ್ತಿರುವುದಕ್ಕೆ ವ್ಯಕ್ತವಾಗುತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಉತ್ತರ ನೀಡಬೇಕು ಎಂದು ಕೇಂದ್ರ ಮಾಜಿ ಸಚಿವ ಎ.ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕೈಗೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಉದ್ದೇಶದಿಂದ ಅಭಿವೃದ್ಧಿ ಕೆಲಸಗಳನ್ನು ಕಡೆಗಣಿಸಿ, ಉಚಿತ ಕೊಡುಗೆಗಳ ಘೋಷಣೆ ಮಾಡಲಾಯಿತು. ಇವು ಪ್ರಾರಂಭದಿಂದಲೂ ಸಮರ್ಪಕವಾಗಿ ಅರ್ಹ ಲಾನುಭವಿಗಳಿಗೆ ಸಿಗುತ್ತಿಲ್ಲ. ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಧ್ಯವಾಗದೇ ಪ್ರಗತಿದಾಯಕ ಕಾಮಗಾರಿಗಳ ನಿರ್ವಹಣೆಯಲ್ಲಿ ವಿಳಂಬವಾಗುತ್ತಿರುವುದು ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಸಂಸದ ಡಾ ಕೆ.ಸುಧಾಕರ್ ಮಾತನಾಡಿ, ಪರಿಶಿಷ್ಟರ ಅಭಿವೃದ್ಧಿಗೆ ಸಂಬAಧಿಸಿದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯಡಿ ರಾಜ್ಯ ಬಜೆಟ್‌ನ ಯೋಜನಾ ವೆಚ್ಚದಲ್ಲಿ ಶೇ.೨೪.೧ರನ್ನು ಅನುದಾನ ಮೀಸಲಿಡಲಾಗುತ್ತದೆ. ಆದರೆ, ಕಳೆದ ಎರಡು ವರ್ಷಗಳಲ್ಲಿನ ೨೫ ಸಾವಿರ ಕೋಟಿ ರೂ  ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರವು ದಲಿತ ವಿರೋಧಿ ನಡೆ ಅನುಸರಿಸುತ್ತಿರುವುದು ಖಂಡನೀಯ. ೨೦೨೫-&೨೬ ರಲ್ಲೂ ಗ್ಯಾರಂಟಿಗಾಗಿ ಎಸ್‌ಸಿಎಸ್‌ಪಿ/ಟಿಎಸ್‌ಪಿಯ ೧೪,೪೮೮ ರೂ ಕೋಟಿ ಅನುದಾನ ಬಳಸಿಕೊಳ್ಳಲು ಸಮಾಜ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಆರೋಪಿಸಿದ್ದಾರೆ.  
ಮಹರ್ಷಿ ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣದ ಚುನಾವಣೆಯಲ್ಲಿ ಹಣ -ಹೆಂಡ- ಹಂಚಿಕೆಗೆ ಬಳಸಿ ವಂಚಿಸಲಾಯಿತು. ಈಗ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದ ವಿಚಾರವಾಗಿ ಅನ್ಯಾಯವೆಸಲಾಗುತ್ತಿದೆ. ಇದನ್ನು ಸಚಿವರು, ಶಾಸಕರು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  
ಪ್ರತಿಭಟನೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಜಿ.ಪಂ.ಮಾಜಿ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ, ನರಸಿಂಹಮೂರ್ತಿ, ನಗರಸಭಾ ಅಧ್ಯಕ್ಷ ಎ.ಗಜೇಂದ್ರ, ಉಪಾಧ್ಯಕ್ಷ ಜೆ.ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net