ಕೆಲ ಶಾಸಕರನ್ನು ಕಳುಹಿಸಿದ್ದೇ ಸಿದ್ದರಾಮಯ್ಯ

New Joshi 2
Published on

ಹುಬ್ಬಳ್ಳಿ: ಕಳೆದ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡೋವಾಗ ಶಾಸಕರನ್ನು ಕಳಸಿದ್ದೆ ಕಾಂಗ್ರೆಸ್. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎನ್ನುವ ಕಾರಣಕ್ಕೆ ಶಾಸಕರನ್ನು ಕಳಿಸಲಾಗಿತ್ತು. ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೆಲ ಶಾಸಕರನ್ನು ಕಳುಹಿಸಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೊಸ ಬಾಂಬ್ ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರಿಗೆ ಆಳ್ವಿಕೆ ಮಾಡಲು ನೈತಿಕತೆ ಇರಲಿಲ್ಲ. ಹೀಗಾಗಿ ನಾವು ಸರ್ಕಾರ ರಚನೆ ಮಾಡಿದ್ವಿ. ಈ ಬಾರಿ ಅವರಿಗೆ (ಕಾಂಗ್ರೆಸ್‌ನವರು) ಬಹುಮತ ಇದೆ. ಪ್ರತಿಪಕ್ಷ ಸ್ಥಾನದಲ್ಲಿ ಕೆಲಸ ಮಾಡಲು ನಮ್ಮ ಪಕ್ಷ ನಿರ್ಧರಿಸಿದೆ ಎಂದರು.

100 ಕೋಟಿ ರೂ. ಆಫರ್ ಮಾಡಿದ್ದಾರೆ ಎನ್ನುವುದಾದರೆ ಶಾಸಕ ರವಿ ಗಾಣಿಗ ಅವರು ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅಂಥವರ ವಿರುದ್ಧ ಭಾರತ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ವಿಷಯಾಂತರ ಮಾಡಲು ಸುಮ್ಮನೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಸೇರಿ ಎಲ್ಲರೂ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಕೋರ್ಟ್ ಆದೇಶ ಇದೆ. ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ? 100 ಕೋಟಿ ರೂ. ಅಲ್ಲ 500 ಕೋಟಿ ರೂ. ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net