ಪ್ರತೀಕ್ಷಾ ಪಾವಸ್ಕರ್‌ಗೆ ಸಿದ್ದರಾಮಯ್ಯ ಪದಕ

10
Published on

ಬಿಎ, ಎಲ್‌ಎಲ್‌ಬಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಬೆಂಗಳೂರಿನ ವಿದ್ಯಾರ್ಥಿನಿ ಪ್ರತೀಕ್ಷಾ ಪಾವಸ್ಕರ್ ಅವರು 2024-25ನೇ ಸಾಲಿನ ಸಿದ್ದರಾಮಯ್ಯ- 75 ಅಮೃತ ಮಹೋತ್ಸವ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪದಾಧಿಕಾರಿಗಳು 2022ರಲ್ಲಿ ಸಭೆ ಸೇರಿ ಸಿದ್ದರಾಮಯ್ಯ ಅವರಿಗೆ 75 ವರ್ಷ ತುಂಬಿದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯಕ್ಕೆ ಶಾಶ್ವತ ಚಿನ್ನದ ಪದಕ ದತ್ತಿ ನೀಡುವ ನಿರ್ಣಯ ಅಂಗೀಕರಿಸಿತ್ತು.

ಅದರಂತೆ ಪ್ರತಿ ವರ್ಷ ಘಟಿಕೋತ್ಸವ ಸಂದರ್ಭದಲ್ಲಿ ಬಿಎ, ಎಲ್‌ಎಲ್‌ಬಿ ಐದು ವರ್ಷದ ಪದವಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ/ ವಿದ್ಯಾರ್ಥಿನಿಗೆ ಸಿದ್ದರಾಮಯ್ಯ 75 ಅಮೃತ ಮಹೋತ್ಸವ ಚಿನ್ನದ ಪದಕ ನೀಡುತ್ತಾ ಬಂದಿದ್ದು, 2022-23ರಲ್ಲಿ ಶ್ರೀರಂಗಪಟ್ಟಣದ ವಿನಯ್ ಚಿನ್ನದ ಪದಕ ಪಡೆದಿದ್ದರು. 2024-25ರಲ್ಲಿ ಬೆಂಗಳೂರಿನ ಪ್ರತೀಕ್ಷಾ ಪಾವಸ್ಕರ್ ಸಿದ್ದರಾಮಯ್ಯ ಹೆಸರಿನ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಪ್ರತೀಕ್ಷಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಅವರು, ನನ್ನ ಹೆಸರಿನಲ್ಲಿ ಚಿನ್ನದ ಪದಕದ ದತ್ತಿ ನೀಡಿದ್ದು ನನಗೆ ಗೊತ್ತಿರಲಿಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಈ ಉದ್ದೇಶ ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ರೈಲ್ವೆ ನಿಲ್ದಾಣದ ಪಕ್ಕದ ಖಾಲಿ ಜಾಗದಲ್ಲಿ ಕಾಂಗ್ರೆಸ್ ಭವನಕ್ಕೆ ಮಾರ್ಚ್ 15ರಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಅದಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಪದಾಕಾರಿಗಳಿಗೆ ಸೂಚನೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವರಾದ ಕೋಟೆ ಶಿವಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net