

ಮೈಸೂರು: ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕಲಿಗರ ಮೇಲೆ ಪ್ರೀತಿ ಬಂದಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾಲ ಮಾಡಿ ಪಕ್ಷ ಸಂಘಟನೆ ಮಾಡಿದ್ದು ನಾವು. ಪೆಂಡಾಲ್ ಹಾಕಿ ವೇದಿಕೆ ಹಾಕಿದ್ದು ನಾವು, ಬಂದು ಭಾಷಣ ಮಾಡಿ ಹೋಗುತ್ತಾ ಇದ್ದಿದ್ದು ಸಿದ್ದರಾಮಯ್ಯ. ಜೆಡಿಎಸ್ ಸಂಘಟನೆಗೆ ಸಿದ್ದರಾಮಯ್ಯ ಎಂದಾದರು ಸಾಲ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
2004ರಲ್ಲೇ ಬಿಜೆಪಿಯ ಅರುಣ್ ಜೆಟ್ಲಿ ನನಗೆ ಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರು. ಆ ಸಂದರ್ಭ ಬಿಜೆಪಿ ಮುಖಂಡರು ಸಿದ್ದರಾಮಯ್ಯ ಅವರನ್ನು ಸಂಪರ್ಕ ಮಾಡಲಿಲ್ಲ. ಇದೀಗ ಅವರಿಗೆ ಒಕ್ಕಲಿಗರ ಮೇಲೆ ಈಗ ಮಮತೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣಲ್ಲಿ ಬರುವ ನೀರು ಕೃತಕವಾದದ್ದು. ನಮ್ಮ ಕಣ್ಣಲ್ಲಿ ಬರುವುದು ಭಾವನಾತ್ಮಕ ಕಣ್ಣೀರು, ಅದು ಹೃದಯದಿಂದ ಬರುವಂತಹ ಕಣ್ಣೀರು ಎಂದರು.
ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಭಜನೆ ಮಾಡಿಕೊಂಡೇ ಬಂದವರು. ಅವರು ಜೆಡಿಎಸ್ ಹಾಗೂ ದೇವೇಗೌಡರ ಕುರಿತು ಮೈಸೂರಿನಲ್ಲಿ ನಿನ್ನೆ ನೀಡಿದ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದೀಗ ಅವರು ಮುಖ್ಯಮಂತ್ರಿ ಹುದ್ದೆಯ ಜತೆಗೆ ‘ಜ್ಯೋತಿಷ್ಯ’ ಹುದ್ದೆಯನ್ನೂ ನಿಭಾಯಿಸುತ್ತಿದ್ದಾರೆ. ಇದೀಗ ಅವರು ಜ್ಯೋತಿಷ್ಯ ಹೇಳುವುದನ್ನೂ ಕಲಿತ್ತಿದ್ದಾರೆ. ಅವರು ನಮ್ಮ ಜ್ಯೋತಿಷ್ಯ ಹೇಳುವುದು ಇರಲಿ, ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಉಳಿಯುತ್ತಾ ಎಂದು ಪ್ರಶ್ನಿಸಿದರು.