

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಬೇಷರತ್ ಕ್ಷಮೆಯಾಚಿಸಬೇಕು ಹಾಗೂ ಇತರರ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಆಗ್ರಹಿಸಿದ್ದಾರೆ.
ಮೋದಿ ಅವರನ್ನು ಇಡೀ ವಿಶ್ವವೇ ಗೌರವಿಸುತ್ತಿದೆ. ಅತಿ ವೇಗವಾಗಿ ಬೆಳೆಯುವ ಆರ್ಥಿಕ ಶಕ್ತಿಯಾಗಿ ಭಾರತವನ್ನು ಬೆಳೆಸಿ ನಿಲ್ಲಿಸಿರುವ ಅವರು ಕರ್ನಾಟಕದ ಆರ್ಥಿಕ ದುಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ಸಹಜ. ಮೋದಿ ಅವರ ಹಿತವಚನ ಗೌರವಿಸುವ ಬದಲು ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸಿದ್ದರಾಮಯ್ಯ ಅವರಂತಹ ಹಿರಿಯರಿಗೆ ಭೂಷಣವಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಕ್ಷಮೆಯಾಚಿಸಿ ಗೌರವ ಉಳಿಸಿಕೊಳ್ಳಬೇಕು. ಭ್ರಷ್ಟಾಚಾರ, ಓಲೈಕೆ ರಾಜಕಾರಣದಲ್ಲಿ ಮುಳುಗಿಹೋಗಿದ್ದ ದೇಶವನ್ನು ಇವತ್ತು ಜಗತ್ತಿನ ಬಲಿಷ್ಠ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿರುವುದು ಸಣ್ಣ ಸಾಧನೆಯಲ್ಲ. ನಮ್ಮೆಲ್ಲರಲ್ಲೂ ನಮ್ಮ ಅಸ್ಮಿತೆ, ಸಂಸ್ಕೃತಿ, ಇತಿಹಾಸ, ಆರ್ಥಿಕ ಶಕ್ತಿ ಬಗ್ಗೆ ಹೆಮ್ಮೆ ಮತ್ತು ಆತ್ಮವಿಶ್ವಾಸ ಮೂಡಿಸಿರುವುದು ಇನ್ನೊಂದು ಕೊಡುಗೆ. ಆಯುಷ್ಮಾನ್ ಭಾರತ್ ಸೇರಿ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಜನರ ಬದುಕಿನ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದಾರೆ ಎಂದಿದ್ದಾರೆ.