

ಶಿರಾ: ಜೆಡಿಎಸ್ ಎಲ್ಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲಘುವಾಗಿ ಮಾತನಾಡಿದ್ದಾರೆ, ಸರ್ಕಾರ ರಚಿಸುವಾಗ ನಾವೆಂದೂ ಅವರ ಮನೆಬಾಗಿಲಿಗೆ ಹೋಗಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದರು.
ಕಳ್ಳಂಬೆಳ್ಳ ಹೋಬಳಿ ದೊಡ್ಡಅಗ್ರಹಾರದಲ್ಲಿ ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಶಿರಾ ಕ್ಷೇತ್ರದಲ್ಲಿ ಅನಿವಾರ್ಯವಾಗಿ ಉಪಚುನಾವಣೆ ಎದುರಿಸುತ್ತಿದ್ದು, ಸತ್ಯನಾರಾಯಣ ಅವರ ಪ್ರಾಮಾಣಿಕತೆಗೆ ಬೆಲೆ ನೀಡಲೇಬೇಕು ಎಂದು ಹೇಳುವ ಮೂಲಕ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡುವ ಸೂಚನೆ ನೀಡಿದರು.
ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರ ಪಕ್ಷ, ಇಲ್ಲಿ ಕಾರ್ಯಕರ್ತರೇ ಹೈಕಮಾಂಡ್. ಅವರೇ ಚುನಾವಣೆ ಮಾಡುತ್ತಾರೆ, ಅಭ್ಯರ್ಥಿ ಆಯ್ಕೆ ಮಾಡುತ್ತಾರೆ, ಜಾತಿ, ಧರ್ಮ ಹಾಗೂ ಹಣಕ್ಕಾಗಿ ಯಾವ ಪಕ್ಷದ ಜತೆಗೂ ನಮ್ಮ ಕಾರ್ಯಕರ್ತರು ಹೋಗುವುದಿಲ್ಲ ಎಂದರು.
ಯಾವುದೇ ಪಾಪದ ಹಣವಿಲ್ಲದ ಬಿ.ಸತ್ಯನಾರಾಯಣ ಅವರನ್ನು ಗೆಲ್ಲಿಸಿದ ಶಿರಾದಲ್ಲಿ ಬಿಜೆಪಿ ಪರವಾಗಿ ಆರ್‌ಎಸ್‌ಎಸ್ ಕಾರ್ಯಕರ್ತರು ಕ್ಷೇತ್ರದಲ್ಲಿ ಪಾಪದ ಹಣ ಹಂಚಲು ಆರಂಭಿಸಿ ಗೆಲುವಿನ ಕನಸು ಕಾಣುತ್ತಿದ್ದಾರೆ ಎಂದು ದೂರಿದರು. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ್ದ ಆರೋಪದಂತೆ ನಾನು ಬಿಜೆಪಿ ಜತೆ ಹೊಂದಿಕೊಂಡಿದ್ದರೆ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತಿದ್ದೆ, ಜಾತ್ಯತೀತ ನಿಲುವಿಗೆ ನಾನು ಬದ್ಧನಾಗಿದ್ದು ಮುಸ್ಲಿಂ ಮತದಾರರು ಅರ್ಥಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಸಹವಾಸ ಮಾಡಿ ಕೆಟ್ಟೆ: ನಾನು ಬಿಜೆಪಿ ಜತೆ ಹೋಗದೆ ಕಾಂಗ್ರೆಸ್ ಸಹವಾಸ ವಾಡಿ ಕೆಟ್ಟು ಹೋದೆ. ನನಗೆ ಅವರ ಮೇಲೆ ಯಾವುದೇ ನಂಬಿಕೆ ಇರಲಿಲ್ಲ. ಆದರೆ, ದೇವೇಗೌಡರ ಒತ್ತಡಕ್ಕೆ ಮಣಿಯಬೇಕಾಯಿತು. ನನ್ನನ್ನು ಮನೆಬಾಗಿಲಿಗೆ ಬಂದು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ಹೋಗಿ ಅರ್ಧ ದಾರಿಯಲ್ಲೇ ಅಡ್ಡಪಲ್ಲಕ್ಕಿ ಬಿಟ್ಟು ಹೋದವರು ಕಾಂಗ್ರೆಸಿಗರು ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಕೆ.ಎಚ್.ಕುವಾರಸ್ವಾಮಿ, ಮಧುಗಿರಿ ಶಾಸಕ ಎಂ.ವಿ.ವೀರಭದ್ರಯ್ಯ, ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಶಾಸಕ ತಿಪ್ಪೇಸ್ವಾಮಿ, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಉಗ್ರೇಶ್, ತಾಪಂ ವಾಜಿ ಉಪಾಧ್ಯಕ್ಷ ಉವಾಶಂಕರ್, ಆರ್.ರಾಮು, ಸಿ.ಆರ್.ಉಮೇಶ್, ವಾಜಿ ಶಾಸಕ ಸುಧಾಕರ್ ಲಾಲ್, ಟಿ.ಡಿ.ಮಲ್ಲೇಶ್ ಇದ್ದರು.
ಶಿರಾ ಜನರೇ ಊಹಿಸುತ್ತಾರೆ... : ಶಿರಾ ಉಪಸಮರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಿದ್ದರಾಮಯ್ಯ ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದ್ದು ಜನರಿಗೆ ಸತ್ಯದ ಅರಿವಾಗಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದರು. ಬಿಜೆಪಿ ಸಂಭವನೀಯ ಅಭ್ಯರ್ಥಿ ಡಾ.ರಾಜೇಶ್‌ಗೌಡ ಹಾಗೂ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ವ್ಯವಹಾರದಲ್ಲಿ ಪಾಲುದಾರರು, ಮಾಜಿ ಸಂಸದ ಮೂಡಲಗಿರಿಯಪ್ಪ ಹಿರಿಯ ಕಾಂಗ್ರೆಸ್ಸಿಗ ಆದರೂ ಅವರ ಪುತ್ರ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದರೇ ಯಾರು ಯಾರ ಜತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದನ್ನು ಶಿರಾ ಜನರೇ ಊಹಿಸುತ್ತಾರೆ ಎಂದು ಎಚ್ಡಿಕೆ ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಯಿತು.
ಸಿದ್ದರಾಮಯ್ಯನಿಂದಲೇ ಕೈ ನಾಶ: ಬೆಂಗಳೂರು: ಸಿದ್ದರಾಮಯ್ಯ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಲಿ. ಅವರ ಇತಿಹಾಸ ತೆಗೆದರೆ ಅವರ ಸಂಸ್ಕೃತಿ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜೆಡಿಎಸ್ ಎಲ್ಲಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಯಾವ ಪಕ್ಷದಿಂದ ಬೆಳೆದರೋ ಅದೇಪಕ್ಷದ ಸರ್ವನಾಶದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸಿದ್ದರಾಮಯ್ಯನಿಂದಲೇ ಸರ್ವನಾಶ ವಾಗಲಿದೆ ಎಂದರು.
ಆಕಾಂಕ್ಷಿಗಳ ಮನವೊಲಿಕೆ ಸರ್ಕಸ್: ಸೋಮವಾರ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಅವರನ್ನು ೋಷಿಸಲಿದ್ದಾರೆ ಎಂಬ ಕಾರ್ಯಕರ್ತರ ಊಹೆ ಹುಸಿಯಾಯಿತು. ಟಿಕೆಟ್ ಬಯಸಿದ್ದ ಕಲ್ಕೆರೆ ರವಿಕುಮಾರ್ ಪಕ್ಷಾಂತರ ಮಾಡಿರುವ ಹಿನ್ನೆಲೆಯಲ್ಲಿ ದಿಢೀರ್ ನಿರ್ಧಾರ ತೆಗೆದುಕೊಳ್ಳದೆ ಕಾದು ನೋಡುವ ತಂತ್ರಕ್ಕೆ ಜೆಡಿಎಸ್ ಮುಖಂಡರು ಬಂದಂತಿದೆ. ತುಮಕೂರಿನಲ್ಲಿ ಟಿಕೆಟ್ ಆಕಾಂಕ್ಷಿ ಸಿ.ಆರ್.ಉಮೇಶ್ ಮನೆಗೆ ತೆರಳಿದ್ದ ಕುಮಾರಸ್ವಾಮಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಬೇಕಾದ ಅನಿವಾರ್ಯತೆ ಮನದಟ್ಟು ಮಾಡಿದ್ದು ಸಾರ್ವತ್ರಿಕ ಚುನಾವಣೆಯಲ್ಲಿ ಕೈಹಿಡಿಯುವ ಭರವಸೆ ಕೂಡ ನೀಡಿದ್ದಾರೆ ಎನ್ನಲಾಗಿದೆ. ತಾಲೂಕು ಅಧ್ಯಕ್ಷ ಉಗ್ರೇಶ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿರುವ ಕುಮಾರಸ್ವಾಮಿ ಕಷ್ಟದ ಕಾಲದಲ್ಲಿ ಪಕ್ಷಕ್ಕೆ ದ್ರೋಹ ಮಾಡದಂತೆ ಮನವಿ ಮಾಡಿದ್ದು ಒಂದೆರಡು ದಿನದಲ್ಲಿ ಟಿಕೆಟ್ ೋಷಿಸುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಜೆಡಿಎಸ್ ಇಲ್ಲ ಎನ್ನುವ ಸಿದ್ದರಾಮಯ್ಯ ಅರ್ಥಮಾಡಿಕೊಳ್ಳಬೇಕು, ತಾಯಿಯ ಸ್ಥಾನದಲ್ಲಿರುವ ಜೆಡಿಎಸ್ ಅನ್ನು ಅವರು ಎಂದೂ ಮರೆಯುವಂತಿಲ್ಲ, ಎಲ್ಲ ರೀತಿಯ ರಾಜಕೀಯ ಅಸ್ತಿತ್ವ ಕೊಟ್ಟಿದ್ದು ಜೆಡಿಎಸ್ ಎಂಬುದನ್ನು ಸಿದ್ದರಾಮಯ್ಯ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ