ಅಧಿಕಾರಕ್ಕಾಗಿ ಜಾತಿಗಣತಿಯ ದಾಳ ಉರುಳಿಸುತ್ತಿರುವ ಸಿದ್ದರಾಮಯ್ಯ

New somanna new
Published on

ಹುಬ್ಬಳ್ಳಿ : ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯೆಂದು ಅನ್ನಿಸುತ್ತಿಲ್ಲ. ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗಿನ ಸಿದ್ದರಾಮಯ್ಯ ಅವರ ನಡವಳಿಕೆ ಎರಡನೇ ಅವಧಿಯಲ್ಲಿ ಕಾಣಿಸುತ್ತಿಲ್ಲ. ಅಧಿಕಾರ, ಸಿಎಂ ಕುಚಿರ್ ಉಳಿಸಿಕೊಳ್ಳುವುದಕ್ಕಾಗಿ ಜಾತಿ ಜನಗಣತಿಯ ದಾಳ ಉರುಳಿಸುತ್ತಿದ್ದಾರೆ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಆರೋಪಿಸಿದ್ದಾರೆ.

ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್​ ರೈಲು ನಿಲುಗಡೆಗೆ ಚಾಲನೆ ನೀಡುವ ಪೂರ್ವದಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ನಾನು ಸಹ ಈ ಮೊದಲು ಸಿದ್ದರಾಮಯ್ಯ ಅವರೊಂದಿಗೆ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡಿದ್ದ ಜನಾಡಳಿತಕ್ಕೂ, ಈಗಿನ ಭ್ರಷ್ಟ ಸರ್ಕಾರಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ದೂರಿದರು.

ಸರ್ಕಾರದ ಪ್ರಮುಖ ಮುಖಂಡರೇ ಇದೊಂದು ನಂಬರ್​ ಒನ್​ ಭ್ರಷ್ಟ ಸರ್ಕಾರವೆಂದು ಬಹಿರಂಗ ಆರೋಪ ಮಾಡಿದ್ದಾರೆ. ಇಂತಹ ಮುಖ್ಯಮಂತ್ರಿಯಾಗಲಿ ಅಥವಾ ಸರ್ಕಾರವಾಗಲಿ ಅಧಿಕಾರದಲ್ಲಿ ಇರಬಾರದು ಎಂದರು.

ರಾಜ್ಯ ಕಾಂಗ್ರೆಸ್​ ಸರ್ಕಾರದ ಬಳಿ ಅಭಿವೃದ್ಧಿ ಯೋಜನೆಗಳಿಗಾಗಿ ಹಣ ಇಲ್ಲ. ಹೀಗಾಗಿ, ಜನರ ಗಮನ ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವುದು, ಸುಳ್ಳು ಆರೋಪಗಳನ್ನು ಮಾಡುವಂತಹ ಕಾರ್ಯಗಳನ್ನು ಕಾಂಗ್ರೆಸ್​ನವರು ಮಾಡುತ್ತಿದ್ದಾರೆ ಎಂದು ದೂರಿದರು.

ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯಾವ ಸ್ಥಳದಲ್ಲಿ ಮಾಡಬೇಕೆಂಬುದನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ತಮಿಳುನಾಡು ಸರ್ಕಾರ ಹೊಸೂರು ಬಳಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಮಿರ್ಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವನ್ನು ಪರಿಗಣಿಸಬೇಕು. ನಂತರ ಕೇಂದ್ರ ಸರ್ಕಾರ ಮತ್ತೊಮ್ಮೆ ಸಾಧಕ-ಬಾಧಕಗಳನ್ನು ಪರಿಗಣಿಸಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧೆಡೆ ಇರುವ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅಭಿವೃದ್ಧಿ ಪಡಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಈಗಾಗಲೇ ಪ್ರಾರಂಭಿಸಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net