ಸಿದ್ದರಾಮಯ್ಯ ಅಲ್ಟ್ರಾ ಲೆಫ್ಟಿಸ್ಟ್: ಶಾಸಕ ಅರವಿಂದ ಬೆಲ್ಲದ ಆರೋಪ

14 Dwd 2 (Aravind Bellad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಾಂಗ್ರೆಸ್ ಸರ್ಕಾರದ ಅವಽಯಲ್ಲಿ ಆಡಳಿತ ಯಂತ್ರ ಕುಸಿದಿದೆ. ಅತಿವೃಷ್ಟಿಯಿಂದ ರೈತರು ತತ್ತರಿಸಿದ್ದಾರೆ. ಈ ವಿಷಯಗಳನ್ನು ಮರೆಮಾಚಿ ಶಾಸಕ- ಸಚಿವರು ಜಾತಿ, ಧರ್ಮ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಟ್ರಾ ಲೆಫ್ಟಿಸ್ಟ್ ಎಂದು ಶಾಸಕ ಅರವಿಂದ ಬೆಲ್ಲದ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಗ್ರಂಥಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಳಖೇಡದ ಭಾಗ್ಯವತಿ ಎಂಬುವರಿಗೆ ವೇತನ ಸಿಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇರೀತಿ ಹಲವರು ನೊಂದ ಆತ್ಮಹತ್ಯೆಗೆ ಶರಣಾಗಿದ್ದು, ಕಾಂಗ್ರೆಸ್ ಸರ್ಕಾರ ಆತ್ಮಹತ್ಯೆ ಭಾಗ್ಯ ಕರುಣಿಸಿದೆ ಎಂದರು.

ಸಿಎ0 ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳಲು ಗಮನ ಹರಿಸಿದ್ದಾರೆ. ಮೊಮ್ಮಗನನ್ನು ರಾಜಕೀಯಕ್ಕೆ ತರಲು ಪರಿಚಯಿಸುತ್ತಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡುವವರು ಮೊದಲು ಸಂಘದ ಕಾರ್ಯಗಳನ್ನು ತಿಳಿದುಕೊಳ್ಳಲಿ. ಆರ್‌ಎಸ್‌ಎಸ್‌ಗೆ ಅದರದೇಯಾದ ಸಾಹಿತ್ಯವಿದ್ದು, ಅದನ್ನು ಓದಿಕೊಳ್ಳಲಿ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡುತ್ತಾರೆ. ಈಗ ಜೀವ ಬೆದರಿಕೆ ಇದೆ ಎನ್ನುತ್ತಿದ್ದಾರೆ. ಅವರದೇ ಸರ್ಕಾರವಿದ್ದು, ಬೆದರಿಕೆ ಹಾಕುವವರ ವಿರುದ್ಧ ತನಿಖೆ ನಡೆಸಲಿ ಎಂದರು.

* ಹಕ್ಕುಚ್ಯುತಿಯಾಗಿದೆ: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ. ಹಾಗಾಗಿ ಹೋಗಿಲ್ಲ. ಇದರಿಂದ ಹಕ್ಕುಚ್ಯುತಿಯಾಗಿದ್ದು, ಸಭಾಪತಿಗೆ ಪತ್ರ ಬರೆಯುತ್ತೇನೆ. ಅಂದು ಸಿದ್ಧಾರೂಢ ಮಠ ಇರುವ ಪ್ರದೇಶದಲ್ಲೇ ಕಾರ್ಯಕ್ರಮ ನಡೆದಿದೆ. ಪೂಜಾ ಪದ್ಧತಿಗೆ ನಮ್ಮ ವಿರೋಧವಿಲ್ಲ. ಆದರೆ, ಹಿಂದು ಪರಂಪರೆಯುಳ್ಳ ಮಠದ ಆವರಣದಲ್ಲಿ ಖುರಾನ್ ಪಠಣ ಬೇಡವಾಗಿತ್ತು. ಸರ್ಕಾರಿ ಕಾರ್ಯಕ್ರಮವಾಗಿದ್ದರೆ ಬ್ಯಾನರ್‌ಗಳಲ್ಲಿ ಕೇವಲ ಕಾಂಗ್ರೆಸ್ ನಾಯಕರ ಫೋಟೊ ಹಾಕಿದ್ದೇಕೆ? ಟ್ರಂಪ್, ಮೋದಿಯವರಿಗೂ ಸಲಹೆ ನೀಡುವ ಸಚಿವ ಸಂತೋಷ ಲಾಡ್ ಅವರೇಕೆ ಇದನ್ನು ಗಮನಿಸಲಿಲ್ಲ? ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net