ಗ್ಯಾರಂಟಿ ಭ್ರಮೆಯಲ್ಲಿ ಸಿದ್ದರಾಮಯ್ಯ: ಬಿ.ವೈ.ವಿಜಯೇಂದ್ರ

27 HHR 05
ಆನವೇರಿಯಲ್ಲಿ ಆಯೋಜಿಸಿದ್ದ ಬಹಿರಂಗ ಪ್ರಚಾರ ಸಭೆಯನ್ನು ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು. ಶಾರದಾ ಪೂರ‌್ಯಾನಾಯ್ಕಾ, ಎಸ್.ರುದ್ರೇಗೌಡ, ಅಶೋಕ್ ನಾಯ್ಕ, ಗೀತಾ ಸತೀಶ್, ಭಾರತಿ ಶೆಟ್ಟಿ, ಡಾ. ಧನಂಜಯ ಸರ್ಜಿ ಇದ್ದರು.
Published on

ಹೊಳೆಹೊನ್ನೂರು: ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬರಗಾಲದಲ್ಲಿಯೂ ನಿರ್ಲಕ್ಷೃ ತೋರುತ್ತಿದ್ದು, ಬರಗಾಲದಲ್ಲಿ ರೈತರ ಹಿತ ಕಾಪಾಡಬೇಕಾದ ಸರ್ಕಾರ ಗ್ಯಾರಂಟಿಗಳ ಬೆನ್ನು ಬಿದ್ದು ರಾಜ್ಯಕ್ಕೆ ಆರ್ಥಿಕ ಸಂಕಷ್ಟ ತಂದಿಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.

ಆನವೇರಿಯಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆಯೋಜಿಸಿದ್ದ ಬೈಕ್ ರ‌್ಯಾಲಿ ಹಾಗೂ ಬಹಿರಂಗ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿಗಳು ಕೈಹಿಡಿಯಲಿವೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಜಾಹೀರಾತುಗಳಿಗೆ ಕೋಟ್ಯಂತರ ರೂ. ವ್ಯಯಿಸುತ್ತಿರುವ ಕಾಂಗ್ರೆಸ್‌ಗೆ ಜನರ ಹಿತ ಬೇಡವಾಗಿದೆ ಎಂದು ದೂರಿದರು.
ಹಿಂದುಳಿದ ವರ್ಗ ಕಡೆಗಣಿಸಿ ಅಲ್ಪಸಂಖ್ಯಾತರ ಓಲೈಕೆಗೆ ಕಸರತ್ತು ನಡೆಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ ಅಕ್ಷರಶಃ ಮರಿಚೀಕೆಯಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು 10 ತಿಂಗಳು ಕಳೆಯುತ್ತಿದ್ದರೂ ಹೇಳಿಕೊಳ್ಳುವ ಒಂದು ಯೋಜನೆ ಜಾರಿಗೊಳಿಸಿಲ್ಲ. ರಾಜ್ಯ ಸರ್ಕಾರದ ದುಷ್ಟ ಆಡಳಿತಕ್ಕೆ ಜನ ಸಿಲುಕಿದ್ದಾರೆ ಎಂದರು.
ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರಿನಲ್ಲಿ ನಮ್ಮ ಅಭ್ಯರ್ಥಿಗಳು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪರ ವಾತವರಣ ನಿರ್ಮಾಣವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಗೆಲುವು ದಾಖಲಿಸುವುದು ನಿಶ್ಚಿತ. ಕಾಂಗ್ರೆಸ್‌ಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸುವುದು ಖಚಿತ ಎಂದು ಹೇಳಿದರು.
ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಮಾತನಾಡಿ, ಎರಡು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನದಂತೆ ಹೊಂದಾಣಿಕೆಯಿಂದ ಬಿಜೆಪಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಲಾಗುವುದು. ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ಮನಸ್ತಾಪಗಳಿಲ್ಲ. ಜೆಡಿಎಸ್ ಕಾರ್ಯಕರ್ತರು ಈಗಾಗಲೇ ರಾಘವೇಂದ್ರ ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿದರು. ಮಂಡಲ ಅಧ್ಯಕ್ಷ ಮಲ್ಲೇಶಪ್ಪ, ಶಾಸಕಿ ಭಾರತಿ ಶೆಟ್ಟಿ, ಮಾಜಿ ಶಾಸಕ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಜೆಡಿಎಸ್ ಮಹಿಳಾಧ್ಯಕ್ಷೆ ಗೀತಾ ಸತೀಶ್, ಬಿಜೆಪಿ ಯುವ ಅಧ್ಯಕ್ಷ ಕಿರಣ್‌ಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್, ಜಿಪಂ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಪ್ರಮುಖರಾದ ಡಾ. ಧನಂಜಯ್ ಸರ್ಜಿ, ಸದಾಶಿವಪ್ಪಗೌಡ, ಮೋಹನ್, ಸತೀಶ್ ಶೆಟ್ಟಿ, ಕಾಂತರಾಜ್, ಎಸ್.ಶ್ರೀನಿವಾಸ್, ಡಿ.ಮಂಜುನಾಥ್, ಸುಬ್ರಹ್ಮಣಿ, ರಾಜೇಶ್ ಪಾಟೀಲ್, ಬಾಳೋಜಿ ಬಸವರಾಜ್, ಚಂದ್ರಕುಮಾರ್, ಸಿದ್ದಲಿಂಗಪ್ಪ, ರವಿಗೌಡ, ರಾಧಾಕೃಷ್ಣ, ಶಂಕರಮೂರ್ತಿ, ನಾಗೇಶ್ವರಾವ್, ಶಿವನಗೌಡ, ಕುಬೇಂದ್ರಪ್ಪ, ತಿಪ್ಪೇಶ್, ವಿಜಯ್‌ರಾವ್ ಇದ್ದರು.

ರಾಜ್ಯದಲ್ಲಿ ಇತ್ತೀಚೆಗೆ 10 ಹಿಂದುಗಳ ಕೊಲೆಯಾಗಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಕಣ್ಣು ಕಟ್ಟಿವೆ. ಹಗಲು ಸಮಯದಲ್ಲಿಯೇ ಮಹಿಳೆಯರು ಓಡಾಡುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ರೈತರಿಗೆ ಬರ ಪರಿಹಾರ ಕೂಡ ನೀಡದೇ ಕೇಂದ್ರದ ಮೇಲೆ ಆರೋಪ ಮಾಡುತ್ತ ಕಾಲಹರಣ ಮಾಡುತ್ತಿದೆ.ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net