ಸಿದ್ದರಾಮಯ್ಯ ಅವರದು ಬಾಯಲ್ಲಿ ಬೆಲ್ಲ ಎದೆಯಲ್ಲಿ ಕತ್ತರಿ ನಡೆ: ದಲಿತ ವಿದ್ಯಾರ್ಥಿ ಒಕ್ಕೂಟ ಟೀಕೆ

SiddaramaiahPCOX_vb_03
Published on

‘ಬಾಯಲ್ಲಿ ಬೆಲ್ಲ ಎದೆಯಲ್ಲಿ ಕತ್ತರಿ’ ಎಂಬ ಗಾದೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ದಲಿತ ಸಮುದಾಯದ ಮುಖಕ್ಕೆ ಹೊಡೆದಂತಾಗಿದೆ ಎಂದು ದಲಿತ ವಿದ್ಯಾರ್ಥಿ ಒಕ್ಕೂಟ ತಿಳಿಸಿದೆ.

ಶನಿವಾರ ಕ್ರಾಫರ್ಡ್ ಭವನದಲ್ಲಿ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ರಜತ ಮಹೋತ್ಸವ ಹಾಗೂ ಜ್ಞಾನದರ್ಶನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಬೇಕಿತ್ತು. ಸಂಪುಟ ಸಚಿವರೊಬ್ಬರ ತಾಯಿ ಮೃತಪಟ್ಟಿರುವುದರಿಂದ ಅವರು ಕಾರ್ಯಕ್ರಮ ರದ್ದುಪಡಿಸಿ ತೆರಳಿದ್ದಾರೆ ಎಂಬು ಭಾವಿಸಿದ್ದೆವು. ಆದರೆ ಬೆಳಗ್ಗೆ ಬೇರೆ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮ ಮತ್ತು ಇಂದಿರಾ ಕ್ಯಾಂಟಿನ್ ಉದ್ಘಾಟನೆಯಲ್ಲಿ ಭಾಗವಹಿಸಿದ್ದಾರೆ. ಅವರ ಈ ನಡೆಯು ದಲಿತರ ಮುಖಕ್ಕೆ ಹೊಡೆದಂತೆ ಆಗಿದೆ. ಬಲಾಢ್ಯ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯ ಹೊಂದಾಣಿಕೆ ಮಾಡಿಕೊಂಡ ಮುಖ್ಯಮಂತ್ರಿ ಅಂಬೇಡ್ಕರ್ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ವಿಷಾದನೀಯ ಎಂದು ದಲಿತ ವಿದ್ಯಾರ್ಥಿ ಒಕ್ಕೂಟದ ಗೌತಮ್ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಕಾರ್ಯಕ್ರಮಕ್ಕಾಗಿ ನಮ್ಮ ಸಂಘಟನೆ ವಾರದಿಂದ ಕೆಲಸ ಮಾಡಿತ್ತು. ಆದರೆ, ಅಂಬೇಡ್ಕರ್ ಅವರನ್ನು ಪೂಜಿಸುವ ದಲಿತ ಸಮುದಾಯದ ಮತ ಪಡೆದು ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ ಎಂಬ ಗಾದೆ ಮಾತಿನಂತೆ ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿಗಳೇ ಅಂಬೇಡ್ಕರ್ ನೀಡಿದ ಸಂವಿಧಾನ ಇರದೇ ಇರುತ್ತಿದ್ದರೆ ನಾನೂ ಕುರಿ ಕಾಯುತ್ತಿದ್ದೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ. ಈ ರೀತಿಯಾಗಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ ಅಂಬೇಡ್ಕರ್ ಅವರ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಭಾಗವಹಿಸದಿರುವುದನ್ನು ದಲಿತ ವಿದ್ಯಾರ್ಥಿ ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net