

ಹುಬ್ಬಳ್ಳಿ : ಮುಡಾ, ವಾಲ್ಮೀಕಿ ನಿಗಮ ಸೇರಿ ಹಲವು ಹಗರಣಗಳ ಆರೋಪಗಳನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ವಕ್ಪ್ ವಿಚಾರವಾಗಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ ಮಾಣಿಪ್ಪಾಡಿ 150 ಕೋಟಿ ರೂ. ಆಮಿಷದ ಆರೋಪ ಮಾಡಿದ್ದು, ಈ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಪ್ ಆಸ್ತಿ ಕಬಳಿಕೆ ಕುರಿತು ಅನ್ವರ ಮಾಣಿಪ್ಪಾಡಿ ವರದಿ ಬಹಿರಂಗಗೊಂಡಿಲ್ಲ. ವರದಿ ಬಹಿರಂಗಗೊಳಿಸದಂತೆ ಸಿದ್ದರಾಮಯ್ಯ ಮತ್ತು ಪ್ರಿಯಾಂಕ ಖರ್ಗೆ ಅವರು 150 ಕೋಟಿ ರೂ. ಆಫರ್ ಮಾಡಿದ್ದಾರೆಂದು ಸ್ವತಃ ಮಾಣಿಪ್ಪಾಡಿ ಆರೋಪಿಸಿದ್ದಾರೆ ಎಂದರು.
ಮುಡಾ ಹಗರಣವನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆರೋಪವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೇಲೆ ಹಾಕುತ್ತಿದ್ದಾರೆ. ಸಿಬಿಐ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ ಎಂದು ಹೇಳಿದರು.
ವಕ್ಪ್ ಪ್ರಕರಣದಲ್ಲಿ ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ, ಕಮರುಲ್ ಇಸ್ಲಾಂ, ರೆಹಮಾನ್ ಖಾನ್ ಸೇರಿ ಹಲವರು ಸಾವಿರಾರು ಕೋಟಿ ರೂ. ಅವ್ಯವಹಾರ ಮಾಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ, ಅನ್ವರ ಮಾಣಿಪ್ಪಾಡಿ ಅವರ ವರದಿಯನ್ನು ಸದನದಲ್ಲಿ ಬಿಡುಗಡೆ ಮಾಡಬೇಕು. ಅಲ್ಲದೆ, ಅದು ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಆಗ ಲೂಟಿಕೋರರ ಹೆಸರು ಬಹಿರಂಗವಾಗುತ್ತದೆ. ಇದರಲ್ಲಿ ರಾಜಕಾರಣ ಮಾಡಬಾರದು ಎಂದರು.
ತಾವು ಈಗಲೂ ಮಾನಸಿಕವಾಗಿ ಬಿಜೆಪಿಯಲ್ಲಿಯೇ ಇರುವುದಾಗಿ ಇದೇ ಸಂದರ್ಭದಲ್ಲಿ ಹೇಳಿದ ಕೆ.ಎಸ್. ಈಶ್ವರಪ್ಪ, ಇಂದಲ್ಲ ನಾಳೆ ಬಿಜೆಪಿಗೆ ಮರಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.