

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 14 ಬದಲಿ ನಿವೇಶನಗಳನ್ನು ನೀಡಲು ನನ್ನ ಅವಧಿಯಲ್ಲಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಲಾಯಿತು. ಈ ವಿಚಾರವನ್ನು ಸಿದ್ದರಾಮಯ್ಯ ಗಮನಕ್ಕೆ ತಂದ ಸಂದರ್ಭ ಅವರು ನಿವೇಶನಗಳನ್ನು ಪಡೆಯುವ ನಿರ್ಧಾರ ವನ್ನು ತಿರಸ್ಕರಿಸಿದ್ದರು. ಮುಂದಿನ ದಿನಗಳಲ್ಲಿ ಏನಾಯಿತು ಎಂಬುದು ನನಗೆ ತಿಳಿದಿಲ್ಲ ಎಂದು ಮುಡಾ ಮಾಜಿ ಅಧ್ಯಕ್ಷ ಡಿ. ಧ್ರುವ ಕುಮಾರ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿರುವ ಸಂದರ್ಭದಲ್ಲಿ ನಿವೇಶನಗಳನ್ನು ಪಡೆಯುವುದು ಸರಿಯಲ್ಲ. ಹಾಗಾಗಿ ನಿವೇಶನಗಳು ಬೇಡ’ ಎಂದು ಸಿದ್ದರಾಮಯ್ಯ ನನ್ನ ಬಳಿ ಹೇಳಿದ್ದರು. ಅಂದಿನ ಸಭೆಯಲ್ಲಿ ಪಾರ್ವತಿ ಅವರಿಗೆ ಸರಿಸಮಾನವಾದ ಬಡಾವಣೆಯಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಮುಂದಿನ ಸಭೆ ನಡೆಸುವಷ್ಟರೊಳಗೆ ನನ್ನ ಅವಧಿ ಮುಕ್ತಾಯಗೊಂಡಿತು. ನನ್ನ ಅವಧಿ ಮುಕ್ತಾಯ ಬಳಿಕ ಏನಾಯಿತು ಎಂಬುದು ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ನನ್ನ ಅವಧಿಯಲ್ಲಿ ನಿವೇಶನಗಳನ್ನು ಪಡೆಯುವ ವಿಚಾರದಲ್ಲಿ ನನ್ನೊಂದಿಗೆ ಯಾವುದೇ ರೀತಿಯ ಪತ್ರ ವ್ಯವಹಾರ ನಡೆಸಿಲ್ಲ. ಅಲ್ಲದೆ, ಪ್ರಕರಣದ 3 ಮತ್ತು 4ನೇ ಆರೋಪಿಗಳಾದ ಮಲ್ಲಿಕಾರ್ಜುನಸ್ವಾಮಿ, ಜೆ.ದೇವರಾಜು ಸಹ ಪತ್ರ ವ್ಯವಹಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಹಾಜಗಾರುವಂತೆ ಇದುವರೆಗೆ ನನಗೆ ನೋಟಿಸ್ ಬಂದಿಲ್ಲ. ಒಂದುವೇಳೆ ನೋಟಿಸ್ ಬಂದರೆ ವಿಚಾರಣೆ ಎದುರಿಸುತ್ತೇನೆ. ಯಾವುದೇ ತನಿಖೆ ಸಂಸ್ಥೆಗಳು ನಡೆಸುವ ವಿಚಾರಣೆಯಲ್ಲಿ ಪಾಲ್ಗೊಂಡು ಅವರು ಬಯಸುವ ಮಾಹಿತಿ ಒದಗಿಸುತ್ತೇನೆ ಎಂದರು.