

ಮೈಸೂರು: ದಸರಾ ಉದ್ಘಾಟನಾ ಸಮಾರಂಭದಲ್ಲಿ ಎದ್ದು ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಕಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.
ಚಾಮುಂಡಿಬೆಟ್ಟದಲ್ಲಿ ಸೋಮವಾರ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ವಿವಿಧ ಕಾಲೇಜು, ಹಾಸ್ಟೆಲ್ ವಿದ್ಯಾರ್ಥಿಗಳನ್ನು ಕರೆತರಲಾಗಿತ್ತು. ಉದ್ಘಾಟನಾ ಕಾರ್ಯಕ್ರಮ ಕೊಂಚ ದೀರ್ಘವಾಗಿದ್ದರಿಂದ ಸಿದ್ದರಾಮಯ್ಯ ಅವರು ಮಾತನಾಡುವ ವೇಳೆ, ಗುಂಪು, ಗುಂಪಾಗಿ ವಿದ್ಯಾರ್ಥಿಗಳು ಹೊರ ನಡೆಯಲು ಆರಂಭಿಸಿದರು.
ಇದನ್ನು ಕಂಡ ಭಾಷಣ ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಟ್ಟಾಗಿ, ಏಯ್ ಕೂತುಕೊಳ್ಳಿ. ಅರ್ಧಗಂಟೆ ಕೂರಲು ಅಗದಿದ್ದರೆ ಯಾಕೆ ಬರಬೇಕಾಗಿತ್ತು. ಮನೆಯಲ್ಲಿ ಇರಬೇಕಿತ್ತು ಎಂದು ಏರುಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರಲ್ಲದೆ, ಹೊರಗೆ ಯಾರನ್ನು ಬಿಡಬೇಡಿ ಕೂರಿಸಿ ಎಂದು ಸ್ಥಳದಲ್ಲಿದ್ದ ಪೊಲೀಸರಿಗೆ ತಾಕೀತು ಮಾಡಿ ತಮ ಭಾಷಣ ಮುಂದುವರಿಸಿದರು.