

ಮೈಸೂರು: ಸಿದ್ದರಾಮಯ್ಯ ಎಂದೂ ಸಹ ಕಾಂಗ್ರೆಸ್‌ಗೆ ಬಾ ಎಂದು ನನಗೆ ಆಹ್ವಾನ ನೀಡಿಲ್ಲ. ನೀನು ಬಿಜೆಪಿಗೆ ಮಾತ್ರ ಹೋಗಬೇಡ ಕಣಪ್ಪ ಎಂದು ಸಲಹೆ ನೀಡಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಸಿದ್ದರಾಮಯ್ಯ ನನಗೆ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿಲ್ಲ, ಜೆಡಿಎಸ್‌ನಲ್ಲೇ ಉಳಿ ಅಂತ ಸಲಹೆಯನ್ನೂ ನೀಡಿಲ್ಲ. ಆದರೆ, ಬಿಜೆಪಿಗೆ ಮಾತ್ರ ಹೋಗಬೇಡ ಎಂದು ಸಲಹೆ ನೀಡಿದ್ದಾರೆ. ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆದಿಲ್ಲ. ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ಹಂತದಲ್ಲಿ ಚರ್ಚೆ ಆಗಬೇಕಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಕ್ಕಲಿಗ ಸಮುದಾಯ ನಮ್ಮೊಂದಿಗೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳುತ್ತಿದ್ದಾರೆ. ಆದರೆ, ಇದೆಲ್ಲ ನಿರ್ಧಾರವಾಗಬೇಕಾದರೆ ಮೂರ್ನಾಲ್ಕು ತಿಂಗಳು ಕಳೆಯಬೇಕು. ನನ್ನ ರಾಜಕೀಯ ನಿರ್ಧಾರ ಪ್ರಕಟಿಸಲು ಮೂರ್ನಾಲ್ಕು ತಿಂಗಳು ಬೇಕು ಎಂದರು ಹೇಳಿದರು.
ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಸಿದ್ದರಾಮಯ್ಯ ಅವರಿಗೆ ಇದೆ. ಹಾಗಾಗಿ ಯಾವ ಕ್ಷೇತ್ರದಲ್ಲಿ ನಿಂತರೆ ಗೆಲ್ಲಬಹುದು? ಯಾವುದು ಸುರಕ್ಷಿತ ಕ್ಷೇತ್ರ ಎಂದು ಅವರು ಹುಡುಕಾಟ ನಡೆಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದಂತಹ ತಪ್ಪು ಮರುಕಳಿಸ ಬಾರದು ಎಂಬ ಹಿನ್ನೆಲೆಯಲ್ಲಿ ಈ ಬಾರಿ ಸುರಕ್ಷಿತ ಕ್ಷೇತ್ರ ಹುಡುಕುತ್ತಿದ್ದಾರೆ. ನಾಮಪತ್ರ ಸಲ್ಲಿಸಿ ಬಂದರೆ ಗೆಲ್ಲುವಂತಹ ಕ್ಷೇತ್ರವನ್ನು ಅವರು ಈ ಬಾರಿ ಹುಡುಕುತ್ತಿದ್ದಾರೆ. ಸುರಕ್ಷಿತ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿ ನಂತರ ರಾಜ್ಯ ಪ್ರವಾಸ ಕೈಗೊಳ್ಳಬೇಕು ಎಂಬುದು ಅವರ ಲೆಕ್ಕಾಚಾರವಾಗಿದೆ. ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಅದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆಗೆ ಅವರಿಗೆ ಆತಂಕ ಇರುವ ಕಾರಣ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಹೇಳಿದರು.