

ಮೈಸೂರು: ಸಿದ್ದರಾಮಯ್ಯ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಮುಖ್ಯಮಂತ್ರಿಯಾದ ನಂತರ ಹಿಂದುಳಿದ ಸಮಾಜವನ್ನು ಮರೆತು ಅಲ್ಪಸಂಖ್ಯಾತರ ಹಿಂದೆ ಹೊರಟ್ಟಿದ್ದಾರೆ. ಅಲ್ಪಸಂಖ್ಯಾತರ ತುಷ್ಟೀಕರಣ ರಾಜಕಾರಣದ ಪರಿಣಾಮ ರಾಜ್ಯದಲ್ಲಿ ಹಾಡಹಗಲೇ ಕೊಲೆಗಳು ನಡೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕ ಸಮುದಾಯಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಹುಬ್ಬಳ್ಳಿಯಲ್ಲಿ ನೇಹಾ ವಿದ್ಯಾರ್ಥಿ ಹತ್ಯೆ ನಡೆದಿದೆ. ವೈಯಕ್ತಿಕ ಕಾರಣಕ್ಕೆ ಹತ್ಯೆ ನಡೆದಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ರಾಜ್ಯದ ಮಹಿಳೆಯರ ಬಗ್ಗೆ ಇವರು ಯಾವ ರೀತಿಯ ಕಾಳಜಿ ಹೊಂದಿದ್ದಾರೆ ಎಂಬುದಕ್ಕೆ ಈ ಹೇಳಿಕೆ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ದೊಡ್ಡ ಸವಾಲಾಗಿದೆ. ಗೃಹ ಸಚಿವರಿಗೆ ರಾಜ್ಯದ ಹೆಣ್ಣು ಮಕ್ಕಳ ಸುರಕ್ಷತೆ ಕುರಿತು ಚಿಂತೆ ಇಲ್ಲ. ಮಹಿಳೆಯರಿಗೆ ರಕ್ಷಣೆ ನೀಡಬೇಕು ಎಂಬ ಕಿಂಚಿತ್ತು ಕಾಳಜಿ ಅವರಿಗೆ ಇಲ್ಲ. ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರು, ಉದ್ಯೋಗಕ್ಕೆ ತೆರಳುವ ಮಹಿಳೆಯರು ಸುರಕ್ಷಿತವಾಗಿ ಮನೆಗೆ ಬರುತ್ತಾರಾ ಎಂಬ ಅನುಮಾನ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ಯಾರಂಟಿಗಳ ಭರಾಟೆಯಲ್ಲಿ ಮುಳುಗಿರುವ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಮೈಸೂರು ಮಾತ್ರವಲ್ಲ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಅಭಿವೃದ್ಧಿಗೆ ಮಾದರಿಯಾದ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಎಂದರು.