ಸಿದ್ದರಾಮಯ್ಯ ಕ್ಷೇತ್ರದಲ್ಲೇ ಈಶ್ವರಪ್ಪ ಗೆದ್ದು ತೋರಿಸಲಿ: ಕೆ.ಬಿ.ಪ್ರಸನ್ನಕುಮಾರ್ ಸವಾಲ್

congress (1)
Published on

ಶಿವಮೊಗ್ಗ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಆಹ್ವಾನ ನೀಡಿದ್ದಾರೆ. ಆದರೆ ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರದಿಂದಲೇ ಈಶ್ವರಪ್ಪ ಅವರು ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಸವಾಲು ಹಾಕಿದರು.

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರಿಗೆ ಇನ್ನೂ ಟಿಕೆಟ್ ಖಚಿತವಾಗಿಲ್ಲ. ಈಗಿರುವಾಗ ಸಿದ್ದರಾಮಯ್ಯ ಅವರು ಶಿವಮೊಗ್ಗದಿಂದ ಸ್ಪರ್ಧೆ ಮಾಡುವಂತೆ ಮತ್ತು ತನ್ನ ವಿರುದ್ಧ ಗೆಲ್ಲುವಂತೆ ಸವಾಲು ಹಾಕಿರುವುದು ಹಾಸ್ಯಾಸ್ಪದವಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಈ ಬಾರಿ ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತರೊಬ್ಬರು ಸ್ಪರ್ಧಿಸಿ ಗೆದ್ದು ತೋರಿಸುತ್ತೇವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಶ್ವರಪ್ಪ ಅವರು ಶೇ.40 ಪರ್ಸೆಂಟ್ ಎಂದು ರಾಜ್ಯದೆಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಸ್ಪರ್ಧಿಸುವ ಕಡೆ ಈಶ್ವರಪ್ಪ ಹೋಗಿ ಶಕ್ತಿ ಪ್ರದರ್ಶನ ಮಾಡಬೇಕು. ಈಶ್ವರಪ್ಪ ಅವರ ಬಳಿ ಹಣವಿದ್ದು ಒಂದು ವೇಳೆ ಈ ಬಾರಿ ಈಶ್ವರಪ್ಪ ಶಿವಮೊಗ್ಗದಿಂದಲೇ ಸ್ಪರ್ಧೆ ಮಾಡಿದರೆ ಖಂಡಿತವಾಗಿಯೂ ಮತ್ತೊಮ್ಮೆ ಸೋಲಿನ ರುಚಿ ತೋರಿಸುತ್ತೇವೆ ಎಂದರು.

ಮಹಾನಗರ ಪಾಲಿಕೆ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಶಾಸಕ ಕೆ.ಎಸ್.ಈಶ್ವರಪ್ಪ ಅವರ ಸ್ಥಿತಿ ಮನೆಯೊಂದು ಮೂರು ಬಾಗಿಲಾಗಿದೆ. ಒಂದು ಕಡೆ ಅವರ ಪುತ್ರ ಕೆ.ಇ.ಕಾಂತೇಶ್ ಅವರೇ ತಾನು ಸ್ಪರ್ಧೆ ಮಾಡುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ಕಾರ್ಯಕರ್ತರು ಶಿವಮೊಗ್ಗ ಕ್ಷೇತ್ರದ ಟಿಕೆಟ್‌ಗೆ ಕಾದುಕುಳಿತಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 11 ಮಂದಿ ಆಕಾಂಕ್ಷಿಗಳು ಟಿಕೆಟ್‌ಗೆ ಅರ್ಜಿ ಹಾಕಿದ್ದು ಯಾರಿಗೆ ಟಿಕೆಟ್ ಸಿಕ್ಕರೂ ಸಂತೋಷವಾಗಿ ಕೆಲಸ ಮಾಡುತ್ತೇವೆ. ಜತೆಗೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಮುಖಂಡರಾದ ಎಸ್.ಕೆ.ಮರಿಯಪ್ಪ, ವಿಜಯಕುಮಾರ್, ದೀಪಕ್‌ಸಿಂಗ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net