

ಬೆಳಗಾವಿ: ಮುಡಾ ಪ್ರಕರಣದಲ್ಲಿ ತಪ್ಪು ಮಾಡಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು. ಕಾನೂನು ಉಲ್ಲಂಘನೆ ಮಾಡಿ 14 ನಿವೇಶನ ಪಡೆದುಕೊಂಡಿರುವುದು ದಾಖಲೆಗಳ ಸಮೇತ ಸಾಬೀತಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಸೋಮವಾರ ಬೆಳಗಾವಿ ಗ್ರಾಮಾಂತರ ಬಿಜೆಪಿ ಕಚೇರಿ ಉದ್ಘಾಟಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ತಪ್ಪು ಮಾಡಿರುವುದನ್ನು ಒಪ್ಪಿಕೊಂಡು ತನಿಖೆ ಎದುರಿಸಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವುದು ಪ್ರತಿಪಕ್ಷಗಳಿಗಿಂತ ಕಾಂಗ್ರೆಸ್ ನಾಯಕರಿಗೆ ಬಹಳ ಖುಷಿಯಾಗಿದೆ. ಮೇಲ್ನೋಟಕ್ಕೆ ಎಲ್ಲರೂ ಅವರ ಬೆನ್ನಿಗೆ ನಿಂತಿದ್ದೇವೆ ಎನ್ನುತ್ತಿದ್ದಾರೆ. ಆದರೆ, ಒಳಗೊಳಗೆ ರಾಜೀನಾಮೆ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ದಾರಿ ತಪ್ಪಿಸುವುದನ್ನು ಬಿಡಲಿ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆ ಅಪ್‌ಡೆವೀಟ್‌ನಲ್ಲಿ ಮುಡಾ ಸ್ವಾಧೀನಪಡಿಸಿಕೊಂಡಿರುವ ಪ್ರದೇಶವನ್ನು ಕೃಷಿ ಭೂಮಿ ಎಂದು ಉಲ್ಲೇಖಿಸಿ ಕಡಿಮೆ ಹಣ ತೋರಿಸಿದ್ದಾರೆ. ಮುಡಾ ಶೇ50:50 ಅನುಪಾತದಲ್ಲಿ ಭೂಮಿ ಹಂಚಿಕೆ ವಿಚಾರದಲ್ಲಿ ಖರೀದಿಸಿದ ಭೂಮಿಯಲ್ಲಿ ನಿವೇಶನ ಹಂಚಿಕೆ ಮಾಡಬೇಕಿತ್ತು. ಕಾನೂನು ಉಲ್ಲಂಘಿಸಿ ಬೇರೆ ಕಡೆ 14 ನಿವೇಶನಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ, ಮುಡಾ ಅಧಿಕಾರಿಗಳು ರಾಜ್ಯ ಸರ್ಕಾರದ ಅನುಮತಿ ಇಲ್ಲದೇ ತಾವೇ ಹಂಚಿಕೆ ಮಾಡಿದ್ದಾರೆ. ಒಂದು ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮತಿ ಕೊಟ್ಟಿದರೆ ಅದು ಕಾನೂನು ಬಾಹೀರ ಎಂದರು. ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಂಸದೆ ಮಂಗಲ ಅಂಗಡಿ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಎಂ.ಬಿ.ಝೀರಲಿ ಇತರರಿದ್ದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ಕೊಟ್ಟಿದ್ದಾರೆ. ತನಿಖೆ ಎದುರಿಸಿ ತಾವು ಸಾಚಾ ಎಂದು ಸಾಬೀತು ಮಾಡಬೇಕು. ಆದರೆ, ರಾಜ್ಯಪಾಲರ ನಿರ್ಣಯವನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ರಾಜ್ಯಪಾಲರ ವಿರುದ್ಧ ಕೆಟ್ಟದಾಗಿ ಮಾತಾಡಿದ್ದಾರೆ. ಅವರಿಗೆ ಅವಮಾನ ಮಾಡುವುದು ಸಲ್ಲ ಎಂದು ಶೆಟ್ಟರ್ ಹೇಳಿದರು.