

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ಪಿ.ಎಂ. ಪ್ರಸನ್ನ ನೀಡಿದ ರಾಜೀನಾಮೆಯಿಂದ ತೆರವುಗೊಂಡ ಸ್ಥಾನಕ್ಕೆ ಬುಧವಾರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಆರ್. ಚೆಲುವರಾಜು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಹಲವಾರು ವರ್ಷಗಳಿಂದ ಮೈಮುಲ್‌ನಲ್ಲಿ ಹಿಡಿತ ಸಾಧಿಸಲು ಕಾಂಗ್ರೆಸ್ ಸತತ ಪ್ರಯತ್ನ ನಡೆಸಿತ್ತು. ಆದರೆ, ಪ್ರತಿ ಬಾರಿಯೂ ಶಾಸಕ ಜಿ.ಟಿ. ದೇವೇಗೌಡರ ಬಣ ಮೇಲುಗೈ ಸಾಧಿಸುತಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಚತುರ ನಡೆಯಿ ಂದ ಈ ಬಾರಿ ಕಾಂಗ್ರೆಸ್ ಮೈಮುಲ್‌ಅನ್ನು ತನ್ನ ತೆಕ್ಕೆಗೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಉಪ ವಿಭಾಗಾಧಿಕಾರಿ ಕೆ.ಆರ್. ರಕ್ಷಿತ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಆರ್. ಚೆಲುವರಾಜು ಅವರಿಂದ ಏಕೈಕ ನಾಮಪತ್ರ ಸ್ವೀಕೃತವಾಯಿತು. ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿ ನಾಮಪತ್ರ ಕ್ರಮಬದ್ಧವಾಗಿದ್ದು, ಏಕೈಕ ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಆರ್. ಚೆಲುವರಾಜು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಘೋಷಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಆರ್. ಚೆಲುವರಾಜು, ನಾಮ ನಿರ್ದೇಶಿತ ಸದಸ್ಯ ಬಿ.ಗುರುಸ್ವಾಮಿ, ಮಾಜಿ ಸಚಿವ ಜಿ.ಟಿ.ದೇವೇಗೌಡ ಬಣಕ್ಕೆ ಸೇರಿದ ಕೆ.ಈರೇಗೌಡ ಪ್ರಬಲ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಈ ಮೂವರನ್ನು ಮನವೊಲಿಸಿದ ಸಿದ್ದರಾಮಯ್ಯ ಚೆಲುವರಾಜು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.