

ಅವಿನಾಶ್ ಜೈನಹಳ್ಳಿ ಮೈಸೂರು
2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಮುಜುಗರ ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತವರು ಜಿಲ್ಲೆಯಿಂದಲೇ ಸ್ಪರ್ಧಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂಬ ಒತ್ತಾಯ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿ ವಲಯದಲ್ಲಿ ಕೇಳಿಬರುತ್ತಿದೆ.
ಸಿದ್ದರಾಮಯ್ಯ ಸದ್ಯ ಸೂಕ್ತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದು, ಕೋಲಾರ, ಬಾದಾಮಿ, ವರುಣ ಪೈಕಿ ಒಂದರಲ್ಲಿ ಸ್ಪರ್ಧಿಸುವುದಾಗಿಯೂ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ 2023ರ ಚುನಾವಣೆಗೆ ಅವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ರಾಜ್ಯದಲ್ಲಿ ಚರ್ಚೆಯಲ್ಲಿರುವ ಪ್ರಮುಖ ವಿಷಯವಾಗಿದೆ.
ಇತ್ತೀಚೆಗಷ್ಟೇ ಕೋಲಾರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಅಲ್ಲಿನ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಮತದಾರರ ಮನಸ್ಥಿತಿ ತಿಳಿದು ಬಂದಿದ್ದಾರೆ. ಬಳಿಕ ಅವರಿಗೆ ಕೋಲಾರ ಕ್ಷೇತ್ರವೂ ಸೇಫ್ ಅಲ್ಲ ಎಂಬ ಅಭಿಪ್ರಾಯ ಎಲ್ಲೆಡೆ ವ್ಯಕ್ತವಾಗುತ್ತಿದೆ. ಈ ನಡುವೆ, ಮೈಸೂರು ಜಿಲ್ಲೆಯ ಅಭಿಮಾನಿಗಳು ತವರು ಕ್ಷೇತ್ರ ವರುಣದಿಂದಲೇ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಜತೆಗೆ, ಕೋಲಾರದ ಭೇಟಿ ಬಳಿಕ ನಡೆಯುತ್ತಿರುವ ರಾಜಕೀಯ ಲೆಕ್ಕಾಚಾರಗಳನ್ನು ಗಮನಿಸಿರುವ ಸಿದ್ದರಾಮಯ್ಯ ಕೂಡ ವರುಣದಿಂದಲೇ ಸ್ಪರ್ಧಿಸಲು ಮನಸ್ಸು ಮಾಡುವ ಸಾಧ್ಯತೆ ಇದೆ. ಅಲ್ಲದೆ, ಚಾಮುಂಡೇಶ್ವರಿ ಕ್ಷೇತ್ರದ ಸೋಲಿನಿಂದ ಮುಜುಗರ ಅನುಭವಿಸಿರುವ ಕಾರಣ ವರುಣದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಚಿಂತನೆಯೂ ಇದೆ ಎನ್ನಲಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸಿದ್ದರಾಮಯ್ಯ ಅವರನ್ನು ಇನ್ನೂ ಕಾಡುತ್ತಲೇ ಇದೆ. ರಾಜಕೀಯ ವೈರಿಗಳೂ ಆ ಸೋಲಿನ ಬಗ್ಗೆಯೇ ಟೀಕಿಸುತ್ತಿರುವುದು ಅವರ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಜತೆಗೆ, ಮುಜುಗರವನ್ನೂ ಉಂಟು ಮಾಡುತ್ತಿದೆ. ಹಾಗಾಗಿ, ಮತ್ತೆ ತವರು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲುವು ಪಡೆದು ರಾಜಕೀಯ ವೈರಿಗಳಿಗೆ ತಕ್ಕ ಉತ್ತರ ನೀಡಬಹುದಾಗಿದೆ. ಅಲ್ಲದೆ, 2023ರ ಚುನಾವಣೆಯೇ ತನ್ನ ಕಡೆಯ ಚುನಾವಣೆ ಎಂದಿರುವ ಸಿದ್ದರಾಮಯ್ಯ ಅವರನ್ನು ವರುಣ ಕ್ಷೇತ್ರಕ್ಕೆ ಮತ್ತೆ ಕರೆತರಲು ಸ್ಥಳೀಯ ನಾಯಕರು ಸಿದ್ಧತೆ ನಡೆಸುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಕೂಡ ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಕೋಲಾರ ಕ್ಷೇತ್ರದ ಭೇಟಿಯ ಬಳಿಕ ಮೈಸೂರಿಗೆ ಆಗಮಿಸಿದ್ದ ಸಿದ್ದರಾಮಯ್ಯ, ವರುಣ ಕ್ಷೇತ್ರದ ಮುಖಂಡರ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೈಸೂರಿಗೆ ಬಂದಾಗಲೆಲ್ಲ ವರುಣ ಕಾರ್ಯಕರ್ತರ ಜತೆ ಹೆಚ್ಚಾಗಿ ಸಂಪರ್ಕ ಬೆಳೆಸುತ್ತಿದ್ದಾರೆ.
‘ಈ ಬಾರಿಯೂ ಮುಖ್ಯಮಂತ್ರಿ ಆಗುವ ಸಾಧ್ಯತೆ ಇರುವ ಕಾರಣ ಬೇರೆ ಯಾವ ಕ್ಷೇತ್ರದಲ್ಲೂ ಸ್ಪರ್ಧಿಸದೆ ವರುಣದಲ್ಲಿಯೇ ಸ್ಪರ್ಧೆ ಮಾಡಬೇಕು. ಕೋಲಾರ, ಬಾದಾಮಿ ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸಿದರೆ 2018ರ ರೀತಿಯೇ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಸೋಲಿಸುವ ಸಾಧ್ಯತೆ ಇದೆ. ಆದ್ದರಿಂದ ವರುಣ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳುಹಿಸಿ, ನೀವೇ ಕ್ಷೇತ್ರದ ಅಭ್ಯರ್ಥಿಯಾಗಬೇಕು. ಕ್ಷೇತ್ರದಲ್ಲಿ ಅಹಿಂದ ಮತ ಹೆಚ್ಚಾಗಿರುವ ಕಾರಣ ನಿಮ್ಮ ಗೆಲುವು ಸುಲಭವಾಗುತ್ತದೆ. ನೀವು ಇಲ್ಲಿ ಸ್ಪರ್ಧಿಸಿದರೆ ಬೇರೆ ಕ್ಷೇತ್ರಗಳ ಪ್ರಚಾರಕ್ಕೆ ಹೆಚ್ಚಿನ ಸಮಯ ನೀಡಬಹುದು. ಕಾಂಗ್ರೆಸ್ ಅಧಿಕಾರಕ್ಕೆ ತಂದು ಮತ್ತೊಮ್ಮೆ ಮುಖ್ಯಮಂತ್ರಿ ಆಗಬಹುದು’ ಎಂದು ಸ್ಥಳೀಯ ಕಾರ್ಯಕರ್ತರೂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಒಂದು ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
ಪಕ್ಕದ ಕ್ಷೇತ್ರಗಳಿಗೂ ಅನುಕೂಲ:
ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೂ ಅನುಕೂಲವಾಗಲಿದೆ. ಮುಖ್ಯವಾಗಿ ಕಳೆದ ಬಾರಿ ಸೋತಿರುವ ನಂಜನಗೂಡು, ತಿ.ನರಸೀಪುರ, ಕೊಳ್ಳೇಗಾಲ, ಕೆ.ಆರ್.ನಗರ, ಪಿರಿಯಾಪಟ್ಟಣ, ಗುಂಡ್ಲುಪೇಟೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೂ ಅನುಕೂಲವಾಗುತ್ತದೆ ಎಂಬುದು ಪಕ್ಷದ ಸ್ಥಳೀಯ ಮುಖಂಡರ ಲೆಕ್ಕಾಚಾರವಾಗಿದೆ.
ಸಿದ್ದರಾಮಯ್ಯ ಅವರ ಏಳು-ಬೀಳು:
ಡಿ.ದೇವರಾಜ ಅರಸು ಬಳಿಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಿದ್ದರಾಮಯ್ಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 4 ದಶಕದಿಂದ ಜಿಲ್ಲೆಯ ರಾಜಕೀಯದಲ್ಲಿ ಹಿಡಿತ ಸಾಧಿಸಿರುವ ಅವರು, 1983ರಲ್ಲಿ ಚುನಾವಣಾ ರಾಜಕೀಯ ಆರಂಭಿಸಿ 10 ಚುನಾವಣೆಗಳನ್ನು ಎದುರಿಸಿ 8 ಬಾರಿ ಗೆದ್ದಿದ್ದಾರೆ. 1983ರಲ್ಲಿ ಪಕ್ಷೇತರವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1985ರಲ್ಲಿ ಜನತಾ ಪಕ್ಷದಿಂದ ಗೆದ್ದು, ಸಚಿವರಾದದರು. ಜತೆಗೆ, ರಾಜ್ಯ ಮಟ್ಟದ ನಾಯಕರಾಗಿ ಗುರುತಿಸಿಕೊಂಡರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ರಾಜಶೇಖರಮೂರ್ತಿ ವಿರುದ್ಧ ಸೋಲು ಕಂಡರು. 1994ರಲ್ಲಿ ಮೂರನೇ ಬಾರಿಗೆ ಆಯ್ಕೆಯಾಗಿ ಹಣಕಾಸು ಸಚಿವರಾದರು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರು ಪ್ರಧಾನಿಯಾದ ಬಳಿಕ ಜೆ.ಎಚ್.ಪಟೇಲ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಆದರು. 1999ರ ಚುನಾವಣೆಯಲ್ಲಿ ಮತ್ತೆ ಸೋಲು ಅನುಭವಿಸಿದರು. 2004ರಲ್ಲಿ ಗೆಲುವು ಪಡೆದು ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಕ್ಷೇತ್ರ ವಿಭಜನೆಯ ಕಾರಣ 2008ರಲ್ಲಿ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಪಡೆದು, ಪ್ರತಿಪಕ್ಷ ನಾಯಕರಾದರು. 2013ರಲ್ಲಿ ಮತ್ತೆ ವರುಣದಿಂದ ಗೆದ್ದು ಮುಖ್ಯಮಂತ್ರಿ ಆದರು. 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆಲುವು ಪಡೆದರು.
2023ರ ಚುನಾವಣೆಯೇ ನನ್ನ ಕಡೆಯ ಚುನಾವಣೆ. ಬಳಿಕ ರಾಜಕೀಯದಲ್ಲಿರುತ್ತೇನೆಯೇ ಹೊರತು, ಚುನಾವಣೆಗೆ ಸ್ಪರ್ಧಿಸುವುದಿಲ್ಲ. ವರುಣ, ಬಾದಾಮಿ, ಕೋಲಾರ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ್ಧಿಸುತ್ತೇನೆ. ಆದರೆ ಎಲ್ಲಿ ನಿಲ್ಲಬೇಕೆಂದು ನಾನಿನ್ನೂ ತೀರ್ಮಾನ ಮಾಡಿಲ್ಲ.ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ