

ಚಿಕ್ಕಮಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಜಸ್ಟೀಸ್ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಹಿಂದುಗಳ ವಿರುದ್ಧ ಸರ್ಕಾರಕ್ಕೆ ವರದಿ ನೀಡಿದಾಗ ರಿಷಿಕುಮಾರ ಸ್ವಾಮೀಜಿ ಅವರು ಏಕೆ ಹೋರಾಟ ಮಾಡಲಿಲ್ಲ ಎಂದು ಜಿಲ್ಲಾ ಬಿಜೆಪಿ ವಕ್ತಾರ ವರಸಿದ್ಧಿ ವೇಣುಗೋಪಾಲ್ ಪ್ರಶ್ನಿಸಿದ್ದಾರೆ.
ಗುರುವಾರ ದತ್ತಮಾಲೆ ಅಭಿಯಾನದಲ್ಲಿ ರಿಷಿಕುಮಾರ ಸ್ವಾಮೀಜಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಅವರು, ದತ್ತಪೀಠವನ್ನು ಸಿ.ಟಿ.ರವಿ ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸ್ವಾಮೀಜಿ ಹಿಂದು ಸಮಾಜವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿ.ಟಿ.ರವಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗದಿದ್ದರೆ ಈ ವೇಳೆಗೆ ದತ್ತಪೀಠ ಇಸ್ಲಾಮೀಕರಣವಾಗುತ್ತಿತ್ತು. ದತ್ತಪೀಠ ಸಂವರ್ಧನ ಸಮಿತಿಯಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿರುವ ವಿಶ್ವ ಹಿಂದು ಪರಿಷತ್, ಬಜರಂಗದಳ ಸಂಘಟನೆ ಜತೆೆ ಶಾಸಕ ಕೈ ಜೋಡಿಸಿದ್ದಾರೆ. ದತ್ತಪೀಠ ಹಿಂದುಗಳಿಗೆ ಸಲ್ಲಬೇಕೆಂದು ಹಲವಾರು ವರ್ಷದಿಂದ ಹೋರಾಟ ನಡೆಸುತ್ತಿರುವುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದ್ದಾರೆ.
ಮಸೀದಿಗಳ ಮೇಲೆ ನಮಾಜ್ಗೆ ಹಾಕಿರುವ ಮೈಕ್ ತೆರವುಗೊಳಿಸುವಂತೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಆಜಾನ್ ಮಾಡಲು ಇರುವ ಮೈಕ್ಗಳನ್ನು ತೆಗೆಸಲು ಸ್ವಾಮೀಜಿ ಏಕೆ ಹೋರಾಟ ಮಾಡುತ್ತಿಲ್ಲ? ತಮಿಳುನಾಡಿನಲ್ಲಿ ಹಿಂದುಪರ ಹೋರಾಟಕ್ಕೆ ಇಳಿದರೆ ಅಲ್ಲಿ ಏಕೆ ಹೋರಾಟ ಮಾಡುತ್ತೀರಿ ಎಂದು ಕೇಳುವ ಸ್ವಾಮೀಜಿ ರಾಜ್ಯದಲ್ಲಿ ಯಾರ ಪರವಾಗಿ ಇದ್ದೀರ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.