

ಮೈಸೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಮಾತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಮೇಲಿನ ಆಪಾದನೆಯಿಂದ ಮುಕ್ತರಾಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕುಟುಕಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಡಾ ಹಗರಣ, ವಾಲ್ಮೀಕಿ ಹಗರಣಗಳು ನಡೆದಿವೆ. ಹಗರಣಗಳಿಗೆ ಈ ಫಲಿತಾಂಶ ಉತ್ತರ ಎಂದು ಭಾವಿಸುವುದು ಸರಿಯಲ್ಲ. ಹಾಗಾಗಿ ಗೆಲುವು ಸಾಧಿಸಿದ ಮ್ತ್ರಾಕ್ಕೆ ಕಾಂಗ್ರೆಸ್ ಬೀಗುವ ಅವಶ್ಯಕತೆ ಇಲ್ಲ. ಮುಡಾ ಹಗರಣ ಮೈಸೂರಿನಲ್ಲಿ ನಡೆದಿರುವ ಹಿನ್ನೆಲೆಯಲ್ಲಿ ರಾಜ್ಯದ ಮೂರು ಉಪ ಚುನಾವಣೆಯ ಮೇಲೆ ಅದು ಪರಿಣಾಮ ಬೀರಿಲ್ಲ. ಒಂದುವೇಳೆ ಮೈಸೂರಿನಲ್ಲಿ ಚುನಾವಣೆ ನಡೆದಿದ್ದರೆ ಪರಿಣಾಮ ಬೀರುವ ಸಾಧ್ಯತೆ ಇತ್ತು ಎಂದು ಅಭಿಪ್ರಾಯಪಟ್ಟರು.
ಉಪ ಚುನಾವಣೆಗಳು ಅಧಿಕಾರದ ಆಶಯ, ಹಣ ಹಾಗೂ ಜಾತಿಯ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ತತ್ವ, ಸಿದ್ಧಾಂತದ ಆಧಾರದ ಮೇಲೆ ನಡೆಯುವುದಿಲ್ಲ. ಈ ಫಲಿತಾಂಶ ಸರ್ಕಾರಕ್ಕೆ ನೀಡಿದ ಅಂಕ ಅಲ್ಲ, ದುಡ್ಡಿಗೆ ಕೊಟ್ಟ ಅಂಕ. ರಾಜ್ಯದಲ್ಲಿ ಎಲ್ಲವೂ ಸರಿ ಇದೆ ಎಂದು ಜನರು ನೀಡಿದ ತೀರ್ಪು ಇದಲ್ಲ. ಒಂದೊಂದು ಕ್ಷೇತ್ರಕ್ಕೆ 10 ಸಚಿವರನ್ನುಗಳನ್ನು ನೇಮಕ ಮಾಡಿ ಸೀರೆ, ಹೆಂಡ, ಹಣವನ್ನು ಕಾಂಗ್ರೆಸ್ ಹಂಚಿಕೆ ಮಾಡಿತು. ಹಾಗಾಗಿ ಅವರಿಗೆ ಗೆಲುವು ದೊರೆಯಿತು. ಇದು ಕೇವಲ ಸಿದ್ದರಾಮಯ್ಯ ಅವರ ಕಾಲದಲ್ಲಿ ಮಾತ್ರವಲ್ಲ ಎಲ್ಲ ಕಾಲದಲ್ಲೂ ಈ ರೀತಿ ಅಧಿಕಾರದಲ್ಲಿರುವ ಪಕ್ಷಗಳು ಹಣ, ಹೆಂಡ ಹಂಚಿಕೆ ಮಾಡಿ ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸಿದೆ ಎಂದರು.
ಚನ್ನಪಟ್ಟಣದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಒಟ್ಟಾರೆ ಮೂರು ಚುನಾವಣೆಗಳಲ್ಲಿ ಸೋಲು ಕಂಡಿದ್ದಾರೆ. ಈ ಸೋಲಿಗೆ ಏನು ಮಾಡಲು ಸಾಧ್ಯವಿಲ್ಲ. ಜನರು ಮತ ಹಾಕಬೇಕು, ನಾವು ಡಬಕ್ಕೆ ಮತ ತುಂಬಲು ಸಾಧ್ಯವಿಲ್ಲ. ಜನತಂತ್ರ ವ್ಯವಸ್ಥೆಯಲ್ಲಿ ಜನರು ನೀಡಿರುವ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದರು.
ಬಿಜೆಪಿಯಲ್ಲಿ ಮೂರ‌್ನಾಲ್ಕು ಗುಂಪು ಇದ್ದು, ಇದು ಬಿಜೆಪಿಗೆ ಒಳ್ಳೆಯದಲ್ಲ. ಬಿಜೆಪಿ ಸ್ವತಂತ್ರವಾಗಿ ಎಂದು ಸಹ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿಲ್ಲ. ಎಲ್ಲವನ್ನು ಸರಿ ಮಾಡಿಕೊಂಡು ಹೋಗಿ ಎಂದು ಬಿಜೆಪಿಗೆ ರಾಜ್ಯದ ಜನರು ಅವಕಾಶ ನೀಡುತ್ತಲೇ ಇದ್ದಾರೆ. ಆದರೆ, ಬಿಜೆಪಿ ಬುದ್ಧಿ ಕಲಿಯುತ್ತಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಾಯಕರು ಒಗ್ಗಟ್ಟಾಗಿ ಪ್ರಚಾರ ಮಾಡಿದರೂ ಸೋಲುಂಟಾಗಿದೆ. ಜನರು ಕೊಟ್ಟ ತೀರ್ಪಿಗೆ ತಲೆಬಾಗಬೇಕು. ಉಪ ಚುನಾವಣೆ ಸೋಲಿಗೆ ಬಿಜೆಪಿಯ ಗುಂಪುಗಾರಿಕೆ ಕಾರಣವಲ್ಲ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗೆಲುವು ದೊರೆತ್ತಿರುವುದು ಸಂತಸದ ವಿಚಾರ ಎಂದು ಹೇಳಿದರು.