

ಮೈಸೂರು: ಎಸ್‌ಸಿ, ಎಸ್ಟಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ, ದಲಿತ ನೌಕರರಿಗೆ ನೇಮಕಾತಿ ಮತ್ತು ಬಡ್ತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಹುಜನ ಸಮಾಜವಾದಿ ಪಾರ್ಟಿಯ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಒಂದು ಜಿಲ್ಲೆಗೆ ಮಾತ್ರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಐಎಎಸ್ ಹುದ್ದೆಗೆ ಅರ್ಹತೆ ಮತ್ತು ಯೋಗ್ಯತೆ ಇದ್ದರೂ ದಲಿತರನ್ನು ನೇಮಕ ಮಾಡದೆ ದಲಿತ ನೌಕರರ ಹಕ್ಕುಗಳನ್ನು ಹೇಗೆ ಹತ್ತಿಕ್ಕುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 80 ಎಸ್ಸಿ, ಎಸ್ಟಿ ಉಪನ್ಯಾಸಕರಿಗೆ 2016ರಲ್ಲಿ ಪ್ರಾಂಶುಪಾಲರಾಗಿ ಬಡ್ತಿ ನೀಡಬೇಕಾಗಿತ್ತು. ಆದರೆ ಇವರಿಗೆ ಬಡ್ತಿ ತಪ್ಪಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ನೇತೃತ್ವದ ಎಸ್‌ಸಿ, ಎಸ್‌ಟಿ ಸದನ ಸಮಿತಿ ನೌಕರರ ಬಡ್ತಿಗೆ ಆದೇಶ ನೀಡಿತ್ತು. ಆದರೆ, ಸಮಿತಿಯ ಆದೇಶವನ್ನು ಕಡೆಗಣಿಸಿ ಎಸ್‌ಸಿ, ಎಸ್‌ಟಿ ಜನಾಂಗದ ಉಪನ್ಯಾಸಕರಿಗೆ ಅನ್ಯಾಯ ಮಾಡಬೇಕೆಂದು ಇತರರಿಗೆ ಬಡ್ತಿ ನೀಡಲಾಗಿದೆ. ಸದನ ಸಮಿತಿ ಆದೇಶವನ್ನು ಪಾಲಿಸದಿದ್ದರೇ ಸದನ ಸಮಿತಿಯನ್ನೇ ರದ್ದುಗೊಳಿಸಿ, ಇಲ್ಲವೇ ಎಸ್‌ಸಿ, ಎಸ್‌ಟಿ ಹಿತರಕ್ಷಣೆ ಮಾಡಲು ವಿಫಲವಾಗಿರುವ ಶಾಸಕ ನರೇಂದ್ರಸ್ವಾಮಿ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ವೋಟು ಮತ್ತು ಅಧಿಕಾರಕ್ಕಾಗಿ ದಲಿತ ಪರ ಎನ್ನುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯದ ಪದವಿಪೂರ್ವ ಶಿಕ್ಷಣ, ಗೃಹ, ಆರಣ್ಯ, ತೋಟಗಾರಿಕೆ, ಕೃಷಿ, ನಗರಾಭಿವೃದ್ಧಿ, ಸಾರಿಗೆ, ಡಿಪಿಎಆರ್, ಇಂಧನ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಮುಂಬಡ್ತಿಗೆ ಅರ್ಹರಾಗಿರುವ ಎಸ್‌ಸಿ, ಎಸ್ಟಿ ನೌಕರರಿಗೆ ಸಕಾಲದಲ್ಲಿ ಬಡ್ತಿ ನೀಡದೆ ವಂಚಿಸುತ್ತಿದ್ದು, ಇದರಿಂದ ನೌಕರರು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ಪದಾಧಿಕಾರಿಗಳಾದ ಪಿ.ಚಂದ್ರಶೇಖರ್, ಬಿ.ಆರ್.ಪುಟ್ಟಸ್ವಾಮಿ, ದಂಡಿಕೆರೆ ಬಸವಣ್ಣ, ಬಿ.ಮಹದೇವಸ್ವಾಮಿ, ಎಚ್.ಗಂಗಾಧರ್, ಪ್ರಭಾಕರ್ ಇದ್ದರು.