

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವೈಯಕ್ತಿಕವಾಗಿ ಹತ್ತಿರದಿಂದ ನಾನು ಬಲ್ಲವನಾಗಿದ್ದು, ಅವರ ಮನಸ್ಸಿನಲ್ಲೂ ಶ್ರೀರಾಮನಿದ್ದಾನೆ. ರಾಮ ಎಲ್ಲರಿಗೂ ಸೇರಿದ್ದಾನೆ. ಹಾಗಾಗಿ ರಾಮನ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ಮುಖಂಡರಿಗೆ ಮನವಿ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮೂರ್ತಿಯ ಪ್ರತಿಷ್ಠಾಪನೆ ನಂತರ ಅಯೋಧ್ಯೆಗೆ ಹೋಗುತ್ತೇನೆಂದು ಸಿಎಂ ಹೇಳಿದ್ದಾರೆ. ಅವರ ಈ ಹೇಳಿಕೆಯೇ ಅವರ ಮನಸ್ಸಿನಲ್ಲೂ ಶ್ರೀರಾಮ ನೆಲೆಸಿದ್ದಾನೆ ಎಂಬುದಕ್ಕೆ ಸಾಕ್ಷಿ ಎಂದರು.
ಬಹಿರಂಗ ಚರ್ಚೆ ಸಲ್ಲ: ಕಾಂಗ್ರೆಸ್‌ನಲ್ಲಿ ಮೂವರು ಡಿಸಿಎಂ ವಿಷಯ ಪ್ರಸ್ತಾಪವಾಗುತ್ತಿದ್ದು ಅವರು ಬಹಿರಂಗ ಚರ್ಚೆ ಮಾಡುವುದನ್ನು ಬಿಟ್ಟು ಹೈಕಮಾಂಡ್ ನಿರ್ಧಾರಕ್ಕೆ ಬಿಡಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಹಣಿಯಲು ಈ ರೀತಿಯ ಚರ್ಚೆ ಸೂಕ್ತವಲ್ಲ. ನಮ್ಮ ಸರ್ಕಾರದಲ್ಲೂ ಮೂವರು ಡಿಸಿಎಂಗಳಿದ್ದರು. ಆದರೆ ಎಲ್ಲೂ ಈ ರೀತಿಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾಂಗ್ರೆಸ್‌ನ ಕೆಲ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದಾರೆ. ಅದು ತಪ್ಪಲ್ಲ. ಆದರೆ ಈ ರೀತಿ ಬಹಿರಂಗ ಚರ್ಚೆ ಮತದಾರರಿಗೆ ಬೇಸರ ಮೂಡಿಸುತ್ತದೆ. ಕಾಂಗ್ರೆಸ್‌ನವರಿಗೆ ಕಿತ್ತಾಡಲು ಮತ ನೀಡಲಾಗಿದೆ ಎಂಬ ಭಾವನೆ ಮೂಡುವಂತೆ ಡಿಸಿಎಂ ಕುರಿತ ಚರ್ಚೆಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾರೂ ಅರ್ಜಿ ಹಾಕಿ ಜನಿಸಲ್ಲ
ಕುರುಬ ಸಮಾಜದಲ್ಲಿ ನಾನು ಅರ್ಜಿ ಹಾಕಿ ಜನಿಸಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯಾರೂ ಅರ್ಜಿ ಹಾಕಿ ಜನಿಸುವುದಿಲ್ಲ. ಅದು ದೇವರ ನಿರ್ಧಾರ. ಜನ್ಮಪಡೆದ ನಂತರ ಸಂಸ್ಕಾರ ಮುಖ್ಯ ಎಂದರು.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಬಾಲರಾಮ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇದು ರಾಜ್ಯದ ಪಾಲಿಗೆ ಸಂತಸದ ವಿಷಯ. ಅಷ್ಟೇ ಅಲ್ಲ ಹೆಮ್ಮೆಯೂ ಹೌದು. ಜಗತ್ತಿನಲ್ಲಿ ಪ್ರಸಿದ್ಧಿ ಪಡೆದ ಅಯೋಧ್ಯೆಯಲ್ಲಿ ಕರ್ನಾಟಕದ ಶಿಲ್ಪಿ ಕೆತ್ತಿರುವ ಮೂರ್ತಿ ಆಯ್ಕೆಯಾಗಿರುವುದು ಅದೃಷ್ಟ ಎಂದು ಅಭಿಪ್ರಾಯಪಟ್ಟರು.
ಸಚಿವ ಮಧು ಬಂಗಾರಪ್ಪಗೆ ಟಾಂಗ್
ಬಿಜೆಪಿ ಹುಚ್ಚರ ಸಂತೆಯಾಗಿದೆ ಎಂಬ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಹುಚ್ಚರ ಬಗ್ಗೆ ಹೇಳುತ್ತ ಹೋದರೆ ದೇಶದಲ್ಲಿರುವ ಆಸ್ಪತ್ರೆಗಳೇ ಸಾಕಾಗುವುದಿಲ್ಲ. ಹಾಗಾಗಿ ಅಂತಹ ಹುಚ್ಚರ ಬಗ್ಗೆ ಹೆಚ್ಚು ಹೇಳುವ ಅಥವಾ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಟಾಂಗ್ ನೀಡಿದರು.