ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ಶಿವೈಕ್ಯ

IMG-20201004-WA0146
Published on

ಚಿಕ್ಕನಾಯಕನಹಳ್ಳಿ: ಗೋಡೆಕೆರೆ ಮಹಾಸಂಸ್ಥಾನ ಮಠದ 9ನೇ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಶ್ರೀ ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ (65) ಭಾನುವಾರ ಬೆಳಗಿನ ಜಾವ ಶಿವಸಾಯುಜ್ಯರಾದರು. ಕಿಬ್ಬನಹಳ್ಳಿ ಶಾಖಾ ಮಠದಲ್ಲಿ ಹೃದಯಾಘಾತದಿಂದ ಸ್ವಾಮೀಜಿ ಮೃತಪಟ್ಟ ಸುದ್ದಿ ತಿಳಿದು ಭಕ್ತರು ಹಾಗೂ ಗೋಡೆಕೆರೆ ಸುತ್ತಮುತ್ತಲ ಗ್ರಾಮಗಳಲ್ಲಿ ಮೌನ ಆವರಿಸಿದೆ.

ಶ್ರೀಗಳು ಗೋಡೆಕೆರೆಯಲ್ಲಿ 1955ರ ಅ.6ರಂದು ವೇದಮೂರ್ತಿಶಿವಯ್ಯ ಹಾಗೂ ಗಂಗಮ್ಮ ದಂಪತಿಯ 5ನೇ ಪುತ್ರರಾಗಿ ಜನಿಸಿದ್ದರು. ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ 28ನೇ ವಯಸ್ಸಿನಲ್ಲಿ 9ನೇ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕಾರಕ್ಕೂ ಪೂರ್ವದಲ್ಲಿಯೇ ಶ್ರೀಗಳು ಪದವಿ ಪಡೆದಿದ್ದ ಕಾರಣಕ್ಕೆ ಗ್ರಾಮೀಣ ಭಾಗದಲ್ಲಿ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.

ಗ್ರಾಮೀಣ ಮಕ್ಕಳು ಶಿಕ್ಷಣಕ್ಕಾಗಿ ನಗರಕ್ಕೆ ತೆರಳುವು ದನ್ನು ತಪ್ಪಿಸಲು ಮಠದಲ್ಲೇ ಶಾಲಾ- ಕಾಲೇಜುಗಳನ್ನು ತೆರೆದಿದ್ದರು. ವಿದ್ಯಾರ್ಥಿ ವಸತಿನಿಲಯ ಆರಂಭಿಸಿ ಅಕ್ಷರ, ಅನ್ನ ದಾಸೋಹ ಮಾಡಿದರು. ಅನಾಥಾಶ್ರಮ ಆರಂಭಿಸಿ ಅಶಕ್ತರಿಗೆ ನೆರವಿನ ಹಸ್ತ ಚಾಚಿದ್ದರು. ಸಮುದಾಯ ಭವನ ನಿರ್ಮಿಸಿ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆ ನಡೆಸುತ್ತಿದ್ದ ಶ್ರೀಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಅಪಾರ ಗೌರವ, ಭಕ್ತಿ ಇದೆ.

ಶಿಕ್ಷಣ ಪ್ರೇಮಿಯಾಗಿದ್ದ ಸ್ವಾಮೀಜಿ!: ಎಲ್ಲರಿಗೂ ಶಿಕ್ಷಣ ಸಿಗಬೇಕು, ಆ ಮೂಲಕ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದ ಶ್ರೀಗಳು ಶಾಖಾ ಮಠದಲ್ಲಿ 1984ರಲ್ಲಿ ಶ್ರೀ ರಂಭಾಪುರಿ ವಿದ್ಯಾಸಂಸ್ಥೆ ಆರಂಭಿಸಿ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿದ್ದರು. ಪ್ರಾಥಮಿಕ ಶಿಕ್ಷಣವನ್ನು ಗೋಡೆಕೆರೆಯಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಮತಿಟ್ಟದಲ್ಲಿ, ಪದವಿ ಯನ್ನು ತಿಪಟೂರಿನ ಪ್ಲಗಟ್ಟಿ ಅಡವಪ್ಪ ಕಾಲೇಜಿನಲ್ಲಿ ಪಡೆದಿದ್ದರು.

ಸಾಮಾಜಿಕ ಹೋರಾಟದಲ್ಲಿ ನೇತೃತ್ವ: ಚಿಕ್ಕನಾಯಕನಹಳ್ಳಿ ಕೆರೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆಯಾಗಬೇಕು ಎಂಬುದು ಶ್ರೀಗಳ ಕನಸಾಗಿತ್ತು. ಈ ಹಿನ್ನೆಲೆಯಲ್ಲಿ ಹೇಮಾವತಿ ನೀರಿಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸುತ್ತಿದ್ದರು, ಇತರ ಸ್ವಾಮೀಜಿಗಳ ಜತೆ ಪಾದಯಾತ್ರೆ ನೇತೃತ್ವವಹಿಸಿ ಹೋರಾಟದ ಕಿಚ್ಚು ಹತ್ತಿಸಿದ್ದರು.

ಶ್ರೀಗಳಿಗೆ ಶಿವೈಕ್ಯರಾಗುವ ಮುನ್ಸೂಚನೆ ಇತ್ತು?: ಪಟ್ಟಾಧ್ಯಕ್ಷರಾಗಿ ಸಮಾಜದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದ ಸ್ವಾಮೀಜಿ ಅವರು ಮರಣದ ಬಗ್ಗೆ ಮೊದಲೇ ತಿಳಿದಿದ್ದರು ಎಂಬ ಬಗ್ಗೆ ಭಕ್ತರಲ್ಲಿ ನಂಬಿಕೆಗಳಿವೆ. ಹೀಗಾಗಿ ಉತ್ತರಾಧಿಕಾರಿ ನೇಮಕ ಮಾಡಿದ್ದರು ಎಂದು ಭಕ್ತರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಒಂದೂವರೆ ವರ್ಷದ ಹಿಂದೆಯಷ್ಟೇ ಮಠದ ಉತ್ತರಾಧಿಕಾರಿಯಾಗಿ ಗೋಡೆಕೆರೆಯ ಶಿವಕುಮಾರ್ ಹಾಗೂ ಪ್ರತಿಭಾ ದಂಪತಿಯ ಒಬ್ಬನೇ ಮಗನಾಗಿದ್ದ 15 ವರ್ಷದ ಸಿದ್ದೇಶ್ ಅವರಿಗೆ ಪಟ್ಟಾಭಿಷೇಕ ಮಾಡಿದ್ದರು. ಕಳೆದ ವರ್ಷವಷ್ಟೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕಿರಿಯ ಶ್ರೀಗಳ ಬಗ್ಗೆಯೂ ಅಪಾರ ಪ್ರೀತಿ ಇಟ್ಟುಕೊಂಡಿದ್ದರು. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಮಠದ ಜವಾಬ್ದಾರಿ ಕಿರಿಯ ಶ್ರೀಗಳ ಹೆಗಲಿಗೇರಿದ್ದು, ಸಣ್ಣ ವಯಸ್ಸಿನಲ್ಲಿ ದೊಡ್ಡ ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net