

ಮಂಡ್ಯ: ರಾಜ್ಯ ಸರ್ಕಾರ ನಡೆಸಿದ ಕಾಂತರಾಜು ಆಯೋಗದ ವರದಿಯು ಸಂವಿಧಾನ ವಿರೋಧಿ ಮತ್ತು ಅವೈಜ್ಞಾನಿಕ. ಮಾತ್ರವಲ್ಲದೆ ಒಕ್ಕಲಿಗ ಸಮುದಾಯಕ್ಕೆ ಮಾರಕವಾಗಿದೆ ಎಂದು ಒಕ್ಕಲಿಗ ಧರ್ಮ ಮಹಾಸಭಾದ ಸಂಸ್ಥಾಪಕ ಸಿದ್ದರಾಮ ಚೈತನ್ಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ತಾಲೂಕು ಒಂದರಲ್ಲಿಯೇ 1 ಲಕ್ಷಕ್ಕೂ ಹೆಚ್ಚು ಗಂಗಟ್ಕರ್ ಒಕ್ಕಲಿಗರಿದ್ದಾರೆ. ಆದರೆ ರಾಜ್ಯದಲ್ಲಿಯೇ 84,000 ಮಾತ್ರ ಇರುವುದಾಗಿ ತೋರಿಸಲಾಗಿದೆ. ಇತರ ಉಪಜಾತಿಗಳಲ್ಲಿ ತಪ್ಪಾದ ಅಂಕಿ ಅಂಶ ನೀಡಿ ಒಕ್ಕಲಿಗರನ್ನು ಅವಸಾನದಂಚಿಗೆ ತಳ್ಳುವ ವರದಿ ಮಂಡಿಸಲಾಗಿದೆ. ರಾಜಸರ್ಕಾರ ಈ ವರಿದಿಯನ್ನು ತಿರಸ್ಕರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸಮುದಾಯದ ಗಂಗಟ್ಕರ್, ಮರಸು, ದಾಸ, ಹಳ್ಳಿಕಾರ, ಸರ್ಪ ಒಕ್ಕಲಿಗ ಉಪಜಾತಿಗಳಿಗೆ ಶೇ.10ರಷ್ಟು ಮೀಸಲಾತಿಯ ಅವಕಾಶವಿದೆ. ಆದರೆ ಉಪಜಾತಿ ಸಹಿತ ಜಾತಿ ಪ್ರಮಾಣಪತ್ರವಿಲ್ಲದ ಕಾರಣ ಮೀಸಲಾತಿ ಸದ್ಬಳಕೆಯಾಗಲಿಲ್ಲ. ನಗರ ಪ್ರದೇಶದ ಒಕ್ಕಲಿಗರನ್ನು ಒಬಿಸಿ ಪಟ್ಟಿಯಿಂದ ತೆಗೆಯಲಾಗಿದ್ದು, ಈಗಲಾದರೂ ಎಚ್ಚೆತ್ತು ಉಪಜಾತಿಗಳನ್ನು ನಮೂದಿಸಿ, ಮೀಸಲಾತಿ ಸವಲತ್ತು ಪಡೆಯಬೇಕು. ಉಪಜಾತಿಗಳ ನಮೂನೆಯಿಂದ ಪ್ರವರ್ಗದ ಬದಲಾವಣೆಯಾಗಬಹುದೇ ಹೊರತು ಜಾತಿ ಬದಲಾಗದು. ಆರ್ಥಿಕವಾಗಿ ಹಿಂದುಳಿದವರು ಮೀಸಲಾತಿಯಲ್ಲಿ ಸವಲತ್ತುಗಳನ್ನು ಪಡೆಯಲು ಉಪಜಾತಿಗಳನ್ನು ನಮೂದಿಸಿ ಸಹಕರಿಸಿ ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಗಣತಿ ವೇಳೆ ಒಕ್ಕಲಿಗರು ತಮ್ಮ ಉಪಜಾತಿಗಳನ್ನು ಕಡ್ಡಾಯವಾಗಿ ನಮೂದಿಸಿ. ಈ ಮೂಲಕ ಮೀಸಲಾತಿ ಪಡೆಯಲು ಮುಂದಾಗಬೇಕು. ಒಕ್ಕಲಿಗರು ಸರಿಯಾಗಿ ತಮ್ಮ ಉಪಜಾತಿಗಳನ್ನು ಬರೆಸುವ ಮೂಲಕ ಸರ್ಕಾರದ ಮೀಸಲಾತಿ, ವಿವಿಧ ಸವಲತ್ತುಗಳನ್ನು ಪಡೆದು ಉಪಜಾತಿಗಳ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾಸಭಾದ ರಾಜ್ಯಸಂಚಾಲಕ ಸಿ.ಎಂ.ಕ್ರಾಂತಿಸಿಂಹ ಮಾತನಾಡಿ, ಅರ್ಹ ಮೀಸಲಾತಿ ಪಡೆಯುವ ಸಂಬಂಧ ರಾಜ್ಯಾದ್ಯಂತ ವಿವಿಧ ಒಕ್ಕಲಿಗ ಉಪಜಾತಿಗಳನ್ನು ಸೇರಿಸಿ ಜಾಗೃತಿ ಆಂದೋಲನ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಆನಂದ್‌ಕುಮಾರ್, ಜಿಲ್ಲಾ ಸಂಚಾಲಕ ಕೆ.ಪಿ.ರಕ್ಷಿತ್‌ಗೌಡ, ನಾಡಪ್ರಭು ಕೆಂಪೇಗೌಡರ ಯುವ ಶಕ್ತಿ ವೇದಿಕೆ ರಾಜ್ಯಾಧ್ಯಕ್ಷ ನರಸಿಂಹೇಗೌಡ, ಕಿರಣ್‌ಕುಮಾರ್‌ಗೌಡ ಇದ್ದರು.