ಬೇಡಿದ ವರ ನೀಡುವ ಬಸವೇಶ್ವರ

Oplus_0
Oplus_0
Published on

ಕರಡಿಗೋಡಿನಲ್ಲಿ 200 ವರ್ಷ ಇತಿಹಾಸವಿರುವ ಸನ್ನಿಧಿ

ಅಂತೋಣಿ ಸಿದ್ದಾಪುರ ತಲಕಾವೇರಿಯ ಬ್ರಹ್ಮ ಕುಂಡಿಕೆಯಿಂದ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲದಲ್ಲಿ ತನ್ನ ಸ್ವರೂಪ ಪ್ರದರ್ಶಿಸುವ ಕಾವೇರಿ ಹರಿದು ಸಾಗುವ ಸ್ಥಳದಲ್ಲೆಲ್ಲಾ ಪವಿತ್ರ ಕ್ಷೇತ್ರಗಳನ್ನೇ ಸೃಷ್ಟಿ ಮಾಡಿದ್ದಾಳೆ. ಅಂಥ ಕ್ಷೇತ್ರಗಳ ಪೈಕಿ ಕೊಡಗಿನ ಕರಡಿಗೋಡು ಶ್ರೀ ಬಸವೇಶ್ವರ ದೇಗುಲವೂ ಒಂದಾಗಿದೆ.

ದೇವಸ್ಥಾನವು ವಿರಾಜಪೇಟೆ ತಾಲೂಕಿನ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ. ದೇವಾಲಯವು ತನ್ನದೇ ಆದ ಪೌರಾಣಿಕ ಇತಿಹಾಸ ಹೊಂದಿದೆ. ಅಪಾರ ಪ್ರಮಾಣದ ಭಕ್ತರನ್ನೂ ಹೊಂದಿದೆ. ಕರಡಿಗೋಡು ಗ್ರಾಮದಲ್ಲಿ ನೆಲೆಸಿರುವ ಕುಕ್ಕುನೂರು ಕುಟುಂಬಸ್ಥರು ಬಸವೇಶ್ವರನನ್ನು ತಮ್ಮ ಆರಾಧ್ಯ ಮತ್ತು ಮನೆ ದೇವರಾಗಿ ಸ್ವೀಕರಿಸಿದ್ದಾರೆ. ನಿತ್ಯವೂ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ.

ಕರಡಿಗೋಡು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಸುಮಾರು 200 ವರ್ಷದ ಇತಿಹಾಸವಿದೆ. ಇಲ್ಲಿನ ಬಸವೇಶ್ವರ ಮೂರ್ತಿ ಬೇಡಿದ ವರ ಕೊಡುವ ದೈವ. ಈತನಿಗೆ ವಿಶೇಷವಾದ ಶಕ್ತಿ ಇದೆ ಎಂದು ಭಕ್ತರು ನಂಬಿದ್ದಾರೆ.

ಸಿದ್ದಾಪುರ ಪಟ್ಟಣದಿಂದ 2 ಕಿ.ಮೀ. ದೂರದ ಕರಡಿಗೋಡು ಗ್ರಾಮದಲ್ಲಿ ದೇಗುಲ ಇದೆ. ಗ್ರಾಮದಲ್ಲಿ ವಾಸವಿದ್ದ ಕುಕ್ಕುನೂರು ಸಣ್ಣಯ್ಯ ಹಾಗೂ ಶಿವಣ್ಣ ಎಂಬವರು ಗ್ರಾಮದ ಪಕ್ಕದಲ್ಲಿಯೇ ಹರಿಯುತ್ತಿರುವ ಕಾವೇರಿ ನದಿಗೆ ಒಮ್ಮೆ ಸ್ನಾನಕ್ಕೆ ತೆರಳಿದ್ದರು. ನದಿಯಲ್ಲಿ ಅವರಿಗೆ ಬಸವೇಶ್ವರನ ಕಲ್ಲಿನ ವಿಗ್ರಹ ದೊರಕಿತು. ಶಾಂತವಾಗಿ ಹರಿಯುತ್ತಿದ್ದ ಕಾವೇರಿ ನದಿಯಿಂದ ವಿಗ್ರಹ ತೆಗೆದು ತುಸು ದೂರ ಸಾಗಿದಾಗ ಅದು ಇದ್ದಕ್ಕಿದ್ದಂತೆ ಭಾರವಾಯಿತು. ಎತ್ತಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಬಂತು. ಕೈಯಲ್ಲಿ ಎತ್ತಬಹುದಾದ ವಿಗ್ರಹ ಇದ್ದಕ್ಕಿದ್ದಂತೆ ಭಾರವಾದಾಗ ಗಾಬರಿಗೊಂಡರು. ಅದನ್ನು ಅವರು ನಿಂತಿದ್ದ ಜಾಗದಲ್ಲಿಯೇ ಪೂರ್ವಭಿಮುಖವಾಗಿ ಇರಿಸಿ ದಣಿವಾರಿಸಿಕೊಂಡರು. ಬಳಿಕ ಮತ್ತೆ ಎತ್ತಲು ಪ್ರಯತ್ನಪಟ್ಟರೂ ಸಾಧ್ಯವಾಗದೆ ಇದ್ದಾಗ ಆ ಜಾಗದಲ್ಲಿಯೇ ಪ್ರತಿಷ್ಠಾಪನೆ ನೆರವೇರಿಸಿದರು ಎಂಬುದು ಇತಿಹಾಸ.

ಪಲ್ಲಕ್ಕಿ ಮೆರವಣಿಗೆ: ಚಾಂದ್ರಮಾನ ಯುಗಾದಿ ಆಚರಣೆ ಮುಗಿದ ಮರುದಿನವೇ ಇಲ್ಲಿನ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಕಾವೇರಿಯಲ್ಲಿ ಗಂಗೆ ಪೂಜೆಯ ಬಳಿಕ ಆರಂಭವಾಗುವ ಪೂಜಾ ಕೈಂಕರ್ಯ ಮತ್ತು ಪಲ್ಲಕ್ಕಿ ಮೆರವಣಿಗೆಯನ್ನು ನೋಡಲು ಸಾವಿರಾರು ಭಕ್ತ ಸೇರುತ್ತಾರೆ. ವಿವಿಧ ಪೂಜಾ ವಿಧಿವಿಧಾನಗಳು ನೆರವೇರುತ್ತವೆ. ಮಡಿಕೇರಿ ಸಮೀಪದ ಬಿಳಿಗೇರಿ ಉದಯಕುಮಾರ ತಂತ್ರಿ ನೇತೃತ್ವದಲ್ಲಿ ಪ್ರತಿವರ್ಷವೂ ದೇವರ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗತ್ತದೆ. 200 ವರ್ಷಗಳ ಇತಿಹಾಸ ಹೊಂದಿರುವ ದೇಗುಲದಲ್ಲಿ ವಾರ್ಷಿಕ ಉತ್ಸವ ಆಚರಣೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.ಉತ್ಸವಕ್ಕೆ ರಾಜ್ಯದ ವಿವಿಧೆಡೆಯ ಭಕ್ತರು ಆಗಮಿಸಿ ದೇವರಿಗೆ ಹರಕೆ ಸಲ್ಲಿಸುತ್ತಾರೆ. ಮದುವೆ ಮತ್ತು ಮಕ್ಕಳಾಗದೆ ಇರುವವರು ಹರಕೆ ಹೊತ್ತರೆ ದೇವರು ಒಲಿಯುತ್ತಾನೆ ಎಂಬುದು ನಂಬಿಕೆ. ಕೊಂಡ ಹಾಯುವ ಮೂಲಕವೂ ಭಕ್ತರು ಹರಕೆ ತೀರಿಸುತ್ತಾರೆ.

ಪ್ರತಿವರ್ಷವೂ ದೇವರ ಉತ್ಸವ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ. ಯುಗಾದಿ ಪಾಡ್ಯದ ನಂತರದ ಬರುವ ಮೊದಲ ಸೋಮವಾರದಂದು ಬಾಳೆಗೊನೆ ಕಡಿದ ಬಳಿಕ ಬಸವೇಶ್ವರ ದೇವರ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಅದಾದ ಬಳಿಕ ಕುಕ್ಕುನೂರು ಕುಟುಂಬಸ್ಥರು 10 ದಿನಗಳ ಕಾಲ ಕಠಿಣ ವ್ರತಾಚರಣೆ ಮಾಡಲಾಗುತ್ತದೆ. ಆ ಸಂದರ್ಭ ಕುಟುಂಬದವರು ಶುದ್ಧ ಸಸ್ಯಾಹಾರವನ್ನು ಮಾತ್ರ ಸೇವಿಸುವ ನಿಯಮವಿದೆ. ದೇವತಕ್ಕ ಮುಖ್ಯಸ್ಥ ದೇವಿಪ್ರಕಾಶ ಅವರ ನೇತೃತ್ವದಲ್ಲಿ ಕುಟುಂಬದ ಪುರುಷರು ಪಲ್ಲಕ್ಕಿ ಹೊತ್ತು ಮೆರವಣಿಗೆ ಸಾಗುವ ಮೂಲಕ ಭಕ್ತಿ ಸಮರ್ಪಣೆ ಮಾಡುತ್ತಾರೆ.

ವಿಶೇಷವೆಂದರೆ ಸಾಮಾನ್ಯವಾಗಿ ಪಲ್ಲಕ್ಕಿಯನ್ನು ಹೊತ್ತವರು ಸಾಗಿಸಿದರೆ, ಇಲ್ಲಿ ಪಲ್ಲಕ್ಕಿಯೇ ಹೊತ್ತವರನ್ನು ಸಾಗಿಸುತ್ತದೆ. ಇದು ಅಗಾಧವಾದ ದೈವ ಶಕ್ತಿ ಎಂದು ನಂಬಲಾಗಿದೆ. ಪಲ್ಲಕ್ಕಿ ಮೆರವಣಿಗೆ ಸಂದರ್ಭ ದೇವರಿಗೆ ಅಡ್ಡಲಾಗಿ ಬಂದವರನ್ನು ಅಲ್ಲಿ ತಡೆದು ನಿಲ್ಲಿಸುವುದು ಮತ್ತು ಅವರು ಬದಿಗೆ ಸರಿದ ಬಳಿಕವೇ ಪಲ್ಲಕ್ಕಿ ಮುಂದಕ್ಕೆ ಸಾಗಲಿದೆ. ವಾಹನಗಳಲ್ಲಿ ಬರುವವರು ಇಳಿದು ಕೆಳಗೆ ನಿಲ್ಲುತ್ತಾರೆ. ಇಲ್ಲದಿದ್ದಲ್ಲಿ ವಾಹನದ ಸನಿಹಕ್ಕೆ ತೆರಳುವ ಪಲ್ಲಕ್ಕಿಯು ಚಾಲಕ ಅಥವಾ ಸವಾರ ಇಳಿದ ಬಳಿಕವೇ ಮುಂದೆ ಸಾಗುತ್ತದೆ.

ವಿಶೇಷ ಆಚರಣೆಗಳು:

ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕ ಮಹೋತ್ಸವ, ಗಣೇಶ ಚತುರ್ಥಿ, ಶಿವರಾತ್ರಿ,ಯುಗಾದಿ, ಕಾವೇರಿ ಸಂಕ್ರಮಣ, ನಾಗಪೂಜೆ ಹಾಗೂ ಪ್ರತಿ ಸೋಮವಾರದಂದು ವಿಶೇಷ ಪೂಜೆಗಳು ಇಲ್ಲಿ ನಡೆಯುತ್ತವೆ.

ಹೂವಿನ ಪ್ರಸಾದ ನೀಡುವ ದೈವ: ಭಕ್ತರಿಗೆ ಬಸವೇಶ್ವರ ದೇವರು ಹೂವು ಪ್ರಸಾದ ನೀಡುವುದು ಇಲ್ಲಿನ ಮತ್ತೊಂದು ವಿಸ್ಮಯ. ಯಾವುದಾದರೊಂದು ಉತ್ತಮ ಕಾರ್ಯವನ್ನು ಮನದಲ್ಲಿ ನೆನೆದು ದೇವರ ಮುಂದೆ ಬೇಡಿದಾಗ ವಿಗ್ರಹದ ಮೇಲಿರಿಸಿದ ಹೂವುಗಳು ಕೆಳಗೆ ಬೀಳುವ ಮೂಲಕ ಸೂಚನೆ ನೀಡಲಾಗುತ್ತದೆ. ಹೂವು ಬಲಭಾಗಕ್ಕೆ ಬಿದ್ದರೆ ಶುಭ, ಎಡಭಾಗಕ್ಕೆ ಬಿದ್ದರೆ ಅಂದುಕೊಂಡ ಸಂಕಲ್ಪ ನೆರವೇರುವುದಿಲ್ಲ ಎಂಬ ನಂಬಿಕೆಯಿದೆ. ದನ, ಕರುಗಳಿಗೆ ಅನಾರೋಗ್ಯವಾದಾಗ ಬಸವೇಶ್ವರನಿಗೆ ಹರಕೆ ಹೊತ್ತರೆ ಕಾಯಿಲೆ ಗುಣವಾಗಿರುವ ಉದಾಹರಣೆಗಳು ಸಾಕಷ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net