

ಸಿದ್ದಾಪುರ: ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ತಾಪಂ ಇಒ ನರಸಪ್ಪ ಹೇಳಿದರು.
ಗ್ರಾಮದಲ್ಲಿ ಕೊಪ್ಪಳ ಜಿಪಂ ಹಾಗೂ ಕಾರಟಗಿ ತಾಪಂ ಹಾಗೂ ಕ್ರೀಡಾ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಜೀವನದಲ್ಲಿ ಉತ್ತಮ ಹವ್ಯಾಸ ಬೆಳೆಸಿಕೊಳ್ಳಬೇಕು. ಉತ್ತಮ ಆರೋಗ್ಯ ಹೊಂದಿದ್ದರೆ, ಜೀವನದಲ್ಲಿ ಸಾಧನೆ ಮಾಡಬಹುದು. ಸದೃಢ ದೇಹಕ್ಕೆ ಕ್ರೀಡೆ ಅಗತ್ಯವಾಗಿದೆ. ಯುವ ಸಮುದಾಯ ವಿವಿಧ ಆಟಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮೀಣ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶ್ವೇತಾ ಮಾತನಾಡಿ, ಯುವ ಸಮುದಾಯದಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಕ್ರೀಡಾಕೂಟ ಆಯೋಜಿಸಲಾಗಿದ್ದು, ಯುವಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಗ್ರಾಪಂ ಉಪಾಧ್ಯಕ್ಷೆ ದ್ಯಾವಮ್ಮ, ಸದಸ್ಯರಾದ ಪ್ರಿಯಾಂಕ ಪವರ್, ಅಜೀಂಮುದ್ದೀನ್, ಶರಣಪ್ಪ ವದ್ದಿಗೇರಿ, ಹೊನ್ನೂರ್, ಕಲೀಂ, ಪಿಡಿಒ ಸಾಯಿನಾಥ್, ಸಿಬ್ಬಂದಿ ವೀರೇಶ್ ಗಿಂಡಿಮಠ, ಪ್ರಕಾಶ್ ಸಜ್ಜನ್ ಇತರರಿದ್ದರು.