

ಸಿದ್ದಾಪುರ: ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ಆದರ್ಶ ಮತ್ತು ಚಿಂತನೆ ತಿಳಿದುಕೊಂಡು, ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಕೊಡಗು ಯೂನಿಯನ್ (ಎಸ್‌ಎನ್‌ಡಿಪಿ) ವತಿಯಿಂದ ಸಿದ್ದಾಪುರದ ನಾರಾಯಣ ಗುರು ಸಭಾಂಗಣದಲ್ಲಿ ಆಯೋಜಿಸಿದ್ದ ೧೬೮ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಅನೇಕ ಆಚಾರ-ವಿಚಾರ, ಸಂಸ್ಕೃತಿ ಮತ್ತು ಭಾಷೆ ಹೊಂದಿದೆ. ಭಾರತೀಯರೆಲ್ಲರೂ ಒಂದು ಎಂಬುದನ್ನು ಸಾರಿದ ಮಹಾನ್ ಮಾನವತಾವಾದಿ ನಾರಾಯಣ ಗುರು. ಒಂದೇ ಕುಲ, ಒಂದೇ ಜಾತಿ ಎಂಬುದನ್ನು ಸಾರಿದ್ದಾರೆ. ಅವರ ಸಂದೇಶ ಸಾರ್ವಕಾಲಿಕವಾಗಿದ್ದು, ಮನುಕುಲಕ್ಕೆ ಆದರ್ಶವಾಗಿದೆ ಎಂದು ಬೋಪಯ್ಯ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಲೆಯಾಳ ಭಾಷಿಕರ ಸಂಖ್ಯೆ ಹೆಚ್ಚಿದೆ. ಆ ನಿಟ್ಟಿನಲ್ಲಿ ನಾರಾಯಣ ಗುರು ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದೆಂದರು. ಆರ್ಯ ಈಡಿಗ ಮಹಾಸಂಸ್ಥಾನದ ಶ್ರೀ ನಾರಾಯಣ ಗುರು ಮಠದ ವಿಖ್ಯಾತನಂದ ಸ್ವಾಮೀಜಿ ಆರ್ಶೀವಚನ ನೀಡಿ, ನಾರಾಯಣ ಗುರು ಅವರ ತತ್ವ ಸಂದೇಶಗಳು ಇಂದಿಗೂ ಪ್ರಸ್ತುತ ಎಂದರು.
ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್ ಮಾತನಾಡಿ, ನಾರಾಯಣ ಗುರು ತತ್ವ ಸಿದ್ಧಾಂತಗಳು ಸಾಮಾಜಿಕ ಪರಿವರ್ತನೆಗೆ ಸಹಕಾರಿ ಯಾಗಿದೆ ಎಂದರು.
ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಮಾತನಾಡಿ, ಈ ವರ್ಷ ಜಿಲ್ಲಾಡಳಿತ ಹಾಗೂ ಇತರರ ಸಹಕಾರದಿಂದ ನಾರಾಯಣಗುರು ಜಯಂತಿ ಹಮ್ಮಿಕೊಂಡಿದ್ದೇವೆ. ಸಮಾಜದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದೇವೆ ಎಂದರು. ಹಿರಿಯ ವಕೀಲ ಎ.ಎಸ್. ಪೊನ್ನಣ್ಣ
ಮಾತನಾಡಿ, ಪ್ರತಿಯೊಬ್ಬರೂ ಸಮಾನವಾಗಿ ಬದುಕುವಂತಾಗಬೇಕೆಂದರು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ, ಕೊಡಗು ಬಿಲ್ಲವ ಸಮಾಜ ಜಿಲ್ಲಾಧ್ಯಕ್ಷ ರಘು ಆನಂದ್, ಹಿಂದೂ ಮಲೆಯಾಳಿ ಸಮಾಜ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಆರ್.ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ ಮತ್ತಿತರರು ಇದ್ದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಾರಾಯಣ ಗುರು ಕುರಿತು ಪುಸ್ತಕ ಬರೆದಿರುವ ಸಾಹಿತಿ ಡಾ.ಜೆ.ಸೋಮಣ್ಣ, ಸುನಿತಾ ಲೋಕೇಶ್, ರಾಣಿ ಅರುಣ ಅವರನ್ನು ಸನ್ಮಾನಿಸಲಾಯಿತು.
ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ಕಾರ್ಯಕ್ರಮ ಆಯೋಜಿಸಿದ ಸ್ಥಳದವರೆಗೆ ಮೆರೆವಣಿಗೆ ನಡೆಯಿತು. ಅಲಂಕೃತ ಮಂಟಪದಲ್ಲಿ ಶ್ರೀ ನಾರಾಯಣ ಗುರು ಪ್ರತಿಮೆಯೊಂದಿಗೆ ನಡೆದ ಮೆರವಣಿಗೆ ಗಮನ ಸೆಳೆಯಿತು. ಚೆಂಡೆ ವಾದ್ಯ, ಕಳಸ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ಸುನೀತಾ ಗಿರೀಶ್, ಸತೀಶ್ ನಿರೂಪಿಸಿದರು. ಪ್ರೇಮಾನಂದ ಸ್ವಾಗತಿಸಿದರು, ರವಿ ಪ್ರಾರ್ಥಿಸಿದರು, ರೀಶಾ ಸುರೇಂದ್ರ ವಂದಿಸಿದರು.