

ಸಿದ್ದಾಪುರ: ತಾಲೂಕಿನಲ್ಲಿ ಶೇ. 10ರಷ್ಟು ಮಳೆ ಕೊರತೆ ಇದ್ದರೂ ಭತ್ತದ ಗದ್ದೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಬಿರು ಬಿಸಿಲಿಗೆ ಭತ್ತದ ಗದ್ದೆಗಳು ಒಣಗಿ ಬೆಂಡಾಗುತ್ತಿವೆ.
ತಾಲೂಕಿನಲ್ಲಿ 5,300 ಹೆಕ್ಟೇರ್‌ನಷ್ಟು ಭತ್ತದ ಕ್ಷೇತ್ರ ಇದ್ದು, ಅದರಲ್ಲಿ ಶೇ. 90ರಷ್ಟು ಕ್ಷೇತ್ರದಲ್ಲಿ ಭತ್ತದ ಸಸಿ ನಾಟಿ ಕಾರ್ಯ ಮುಕ್ತಾಯವಾಗಿದೆ. ಇದರಲ್ಲಿ ಸುಮಾರು 3,300 ಹೆಕ್ಟೇರ್‌ನಲ್ಲಿ ನೀರಿನ ಕೊರತೆ ಉಂಟಾಗಿದೆ. ಇನ್ನು ನೀರೇ ಇಲ್ಲದ್ದರಿಂದ 350 ಎಕರೆಯಷ್ಟು ಕ್ಷೇತ್ರದಲ್ಲಿ ಗದ್ದೆ ನಾಟಿ ಮಾಡಿಲ್ಲ. ಜೂನ್‌ನಲ್ಲಿ ಮಳೆ ಸುರಿಯಲೇ ಇಲ್ಲ. ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ದಾಖಲೆ ಮಳೆ ಬಿದ್ದಿದ್ದರಿಂದ ಕೆಲವೆಡೆ ಭತ್ತದ ಸಸಿಗಳು ನೀರಿನಲ್ಲಿ ಮುಳುಗಿ ನಾಶವಾಗಿವೆ. ಇನ್ನು ನಾಟಿ ಮಾಡಿದ ಗದ್ದೆಗಳಲ್ಲಿ ನೀರು ತುಂಬಿ ಹಾನಿ ಉಂಟಾಗಿದ್ದು, ಅವುಗಳಿಗೆ ಈಗಾಗಲೇ ತಾಲೂಕು ಆಡಳಿತ ಪರಿಹಾರ ನೀಡಿದೆ. ಮಳೆ ಕೊರತೆಯಿಂದ ಬೆಳೆ ಹಾನಿ ಉಂಟಾದರೆ ಆ ಕುರಿತು ಸಮೀಕ್ಷೆ ನಡೆಸಲಾಗುವುದು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ತಿಳಿಸಿದ್ದಾರೆ.
ಶೇ. 10ರಷ್ಟು ಮಳೆ ಕೊರತೆ: ತಾಲೂಕಿನಲ್ಲಿ ಈವರೆಗೆ 2,663 ಮಿ.ಮೀ. ಮಳೆ ಬೀಳಬೇಕಿತ್ತು. ಆದರೆ, 2,406 ಮಿ.ಮೀ. ಮಳೆ ಆಗಿದ್ದು, ಶೇ. 10ರಷ್ಟು ಮಳೆ ಕಡಿಮೆಯಾಗಿದೆ. ಆಗಸ್ಟ್‌ನಲ್ಲಿ ಮಳೆ ಬೀಳದೆ ಇರುವುದರಿಂದ ನಾಟಿ ಮಾಡಿದ ಗದ್ದೆಗಳಿಗೆ ನೀರಿನ ಕೊರತೆ ಉಂಟಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ ಆಗದ್ದರಿಂದ ಭತ್ತದ ಬೆಳೆಗೆ ನೀರಿನ ಕೊರತೆ ಉಂಟಾಗಿದೆ. ನೀರಿನ ಕೊರತೆಯಿಂದ ಬೆಳೆ ಹಾನಿ ಸಂಭವಿಸಿರುವ ಕುರಿತು ಇಲ್ಲಿಯವರೆಗೆ ಯಾವುದೇ ಸಮೀಕ್ಷೆ ನಡೆಸಿಲ್ಲ. ಸರ್ಕಾರದ ಸೂಚನೆ ಬಂದ ತಕ್ಷಣ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.ಎಸ್.ಎಂ. ಸುಮಾಸಹಾಯಕ ನಿರ್ದೇಶಕ ಕೃಷಿ ಇಲಾಖೆ ಸಿದ್ದಾಪುರ