ಸಿದ್ದಾಪುರ-ಸೊರಬ ರಾಜ್ಯ ಹೆದ್ದಾರಿ ಹೊಂಡಮಯ

SDP HONDA GUNDI
Published on

ಸಿದ್ದಾಪುರ: ಇದು ಶಿರಸಿ-ನೀಲೆಕಣಿ ರಸ್ತೆಯ ಅವ್ಯವಸ್ಥೆ ಅಲ್ಲ. ಇದು ಸಿದ್ದಾಪುರ-ಸೊರಬ ರಾಜ್ಯ ಹೆದ್ದಾರಿಯ ಹಾಳದಕಟ್ಟಾದಲ್ಲಿನ ಸ್ಥಿತಿ. ಹೆದ್ದಾರಿಯಲ್ಲಿ ವಿವಿಧ ಆಕೃತಿಯ ಚಿತ್ತಾರದ ದರ್ಶನ. ಇಲ್ಲಿ ಸಂಚಾರ ಮಾಡುವ ವಾಹನ ಸವಾರರು, ಪಾದಚಾರಿಗಳು ಎಚ್ಚರದಿಂದಲೇ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯಿದೆ.

ಸಿದ್ದಾಪುರ ಪಟ್ಟಣದಿಂದ ಸೊರಬ ರಸ್ತೆಗೆ ಪಾದಾರ್ಪಣೆ ಮಾಡುತ್ತಿದ್ದಂತೆ ಹೊಂಡಗಳ ಸರಮಾಲೆ. ಒಂದಕ್ಕಿಂತ ಒಂದು ಚಿಕ್ಕದು, ದೊಡ್ಡದು. ಕೆಲವೆಡೆ ಇಡೀ ರಸ್ತೆಯನ್ನೇ ಆವರಿಸಿರುವ ಹೊಂಡ ವಾಹನಗಳನ್ನೇ ನುಂಗುವಂತಿವೆ.

ನಿತ್ಯ ಸಾವಿರಾರು ವಾಹನ ಸಂಚಾರ ಮಾಡುವುದರ ಜತೆಗೆ ಈ ರಸ್ತೆಯಲ್ಲಿ ಹಾಳದಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜ್​ನ ವಿದ್ಯಾರ್ಥಿಗಳು, ಭಕ್ತರು ಸ್ಥಳೀಯ ದೇವಾಲಯಗಳಿಗೆ ಹಾಗೂ ಸ್ಥಳೀಯ ಜನತೆ ಪೇಟೆ, ಪಟ್ಟಣಕ್ಕೆ ಹೋಗಿ ಬರುವಾಗ ಪಡುವ ಸಂಕಟ ಅಷ್ಟಿಷ್ಟಲ್ಲ.

ರಸ್ತೆಯಲ್ಲಿ ವಾಹನ ಬಂದ ತಕ್ಷಣ ಕೆಸರಿನ ನೀರು ತಾಗಬಾರದೆಂದು ರಸ್ತೆ ಬಿಟ್ಟು ದೂರ ಓಡಬೇಕಾಗಿದೆ. ಇನ್ನು ಕೆಲವು ಅಂಗಡಿಮುಂಗಟ್ಟುಗಳ, ರಸ್ತೆ ಪಕ್ಕದ ಮನೆಗಳ ಗೋಡೆಗಳಿಗೆ ಕೆಸರಿನ ನೀರು ಚಿಮ್ಮಿ ಚಿತ್ತಾರ ಬಿಡಿಸಿದಂತೆ ಗೋಚರಿಸುತ್ತಿದೆ. ಇನ್ನು ಸ್ಥಳೀಯ ನಿವಾಸಿಗರು ನಿತ್ಯ ಎದುರಿಸುತ್ತಿರುವ ಸಮಸ್ಯೆಯನ್ನು ಯಾರೂ ಕೇಳುವವರಿಲ್ಲದಂತಾಗಿದೆ.

ಈಗಾಗಲೇ ರಸ್ತೆ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಎರಡು ಬಾರಿ ರಸ್ತೆಯಲ್ಲಿನ ಹೊಂಡ ಮುಚ್ಚಿದ್ದರೂ ಏನೂ ಪ್ರಯೋಜನವಾಗಿಲ್ಲ. ಹೊಂಡ ಮುಚ್ಚಿ ಬೆಳಗಾಗುವುದರೊಳಗೆ ಪುನಃ ಹೊಂಡಗಳ ದರ್ಶನ ಆಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಬೇಸಿಗೆಯಲ್ಲಿ ಹೊಂಡ ಮುಚ್ಚಿದ್ದಾರೆ. ಆದರೂ ಈ ಸ್ಥಿತಿ ತಲುಪಿದೆ. ಇದು ಯಾವ ರೀತಿ ಕಾಮಗಾರಿ ಮಾಡಿದ್ದಾರೆ ಎಂದು ಜನತೆ ಆಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಹೊಂಡವನ್ನು ಎರಡು ಬಾರಿ ಮುಚ್ಚಲಾಗಿದೆ. ಇನ್ನೊಂದು ವಾರದೊಳಗೆ ಮತ್ತೆ ಹೊಂಡ ಮುಚ್ಚಲಾಗುವುದು. ಈ ರಸ್ತೆಯನ್ನು ಮರುಡಾಂಬರೀಕರಣ ಮಾಡುವುದಕ್ಕೆ ಶಾಸಕರ ಗಮನಕ್ಕೆ ತರಲಾಗಿದೆ. | ಶಶಿಕಾಂತ ಗೌಡ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net