

ಸಿದ್ದಾಪುರ: ಬಿಟ್ಟು ಬಿಡದೇ ಮಂಗಳವಾರ ತಡರಾತ್ರಿಯಿಂದ ಕೆಲ ಗಂಟೆಗಳ ಕಾಲ ಸಿದ್ದಾಪುರ ಸೇರಿ ಇತರೆಡೆ ಭಾರೀ ಮಳೆ ಸುರಿದಿದ್ದು, ನೀರು ನುಗ್ಗಿದ ಪರಿಣಾಮ ಭತ್ತದ ಗದ್ದೆಗಳು ಜಲಾವೃತವಾಗಿವೆ.
ಸಿದ್ದಾಪುರ, ಬರಗೂರು, ಕೊಟ್ನೆಕಲ್, ಗುಂಡೂರು, ಸಿಂಗನಾಳ, ಉಳೇನೂರು, ಕಿಂದಿ ಕ್ಯಾಂಪ್, ಮುಸ್ಟೂರು ಸೇರಿ ಇತರೆಡೆ ಭಾರೀ ಮಳೆ ಸುರಿದಿದೆ. ಈ ಹಿನ್ನೆಲೆ ಗ್ರಾಮೀಣ ಪ್ರದೇಶಗಳ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಇನ್ನೂ ಹಳ್ಳದ ಪಕ್ಕದಲ್ಲಿರುವ ಜಮೀನುಗಳಲ್ಲಿ ನಾಟಿ ಮಾಡಿದ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಸಂಪೂರ್ಣವಾಗಿ ಜಲಾವೃತಗೊಂಡಿವೆ.
ಈಗಾಗಲೇ ಭತ್ತ ನಾಟಿಗೆ ಭೂಮಿ ಹದಗೊಳಿಸುವುದು, ರಸಗೊಬ್ಬರ ಸಿಂಪಡಣೆ, ಕೂಲಿ ಕಾರ್ಮಿಕರ ಬಳಕೆ ಸೇರಿ ಇತರೆ ಕೃಷಿ ಚಟುವಟಿಕೆಗಳನ್ನು ಅನ್ನದಾತರು ಸಾವಿರಾರು ರೂ. ವ್ಯಯಿಸಿದ್ದು, ರೈತರು ಕೊಂಚ ಕಸಿವಿಸಿಯಾಗಿದ್ದಾರೆ. ಈಗಾಗಲೇ, ಕೆಳ ಭಾಗದ ರೈತರು ಭತ್ತ ನಾಟಿ ಮಾಡಿದ್ದು, ಜಮೀನುಗಳಿಗೆ ಸಮರ್ಪಕ ನೀರು ದೊರೆಯದ ಕಾರಣ ಸಂಕಷ್ಟದಲ್ಲಿದ್ದರು. ಈ ಮಳೆ ಕೆಳ ಭಾಗದ ರೈತರಿಗೆ ಖುಷಿ ನೀಡಿದೆ. ಮಳೆಯ ಹೊಡೆತಕ್ಕೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ನೀರು ನಿಂತಿದ್ದು, ಕೆಸರುಮಯವಾಗಿವೆ.