

ಸಿದ್ದಾಪುರ: ಬೆಂಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಬೆಳೆ ಮಲಗಿದ್ದು, ರೈತರು ಕಂಗಲಾಗಿದ್ದಾರೆ. ತಾಲೂಕಾದ್ಯಂತ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯು ರೈತರಿಗೆ ಗಾಯದ ಮೇಲೆ ಬರೆ ಎಳೆದಿದೆ.
ಸಿದ್ದಾಪುರ, ಕಾರಟಗಿ, ಜಮಾಪುರ, ಉಳೇನೂರು, ನಂದಿಹಳ್ಳಿ, ಕೊಟ್ನೇಕಲ್, ಹುಳ್ಕಿಹಾಳ, ಕಕ್ಕರಗೋಳ, ಈಳಿಗನೂರು ಸೇರಿದಂತೆ ಇತರೆಡೆ ಗಾಳಿ-ಮಳೆ ಬೆಳೆಗೆ ಭಾರಿ ಹಾನಿಯಾಗಿದೆ. ಈಗಾಗಲೇ ರೈತರು ಭೂಮಿ ಹದಗೊಳಿಸುವುದು, ಸಸಿ ಮಡಿ ನಿರ್ವಹಣೆ, ಭತ್ತ ನಾಟಿ, ಬೆಳೆಯ ರಕ್ಷಣೆಗೆ ರಸಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಣೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಾವಿರಾರು ರೂ. ವ್ಯಯಿಸಿದ್ದಾರೆ. ಈಗ ಸದ್ಯ ನಾಟಿ ಮಾಡಿದ ಭತ್ತ ತೆನೆ ಬಿಡುವ ಹಂತದಲ್ಲಿದೆ. ಈಗಾಗಲೇ ಪಂಪ್‌ಸೆಟ್ ಸೌಲಭ್ಯ ಹಾಗೂ ಮಂಚೂಣಿಯಾಗಿ ಭತ್ತ ನಾಟಿ ಮಾಡಿರುವ ಜಮೀನುಗಳಲ್ಲಿ ಬೆಳೆ ಕಟಾವಿಗೆ ಸಿದ್ಧವಾಗಿದೆ. ಇನ್ನೇನು ದೀಪಾವಳಿ ಮುಗಿದ ಬಳಿಕ ಕಟಾವಿಗೆ ರೈತರು ಸಜ್ಜುಗೊಂಡಿದ್ದರು. ಆದರೆ, ಮೊಡ ಕವಿದ ವಾತಾವರಣ ಹಾಗೂ ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ಭತ್ತದ ತೆನೆಗಳು ಹಾಳಾಗಿವೆ. ಕೈಗೆ ಬಂದು ತುತ್ತು ಬಾಯಿಗೆ ಬರಬೇಕು ಎನ್ನುವ ಸಂದರ್ಭದಲ್ಲಿ ಮಳೆ ಇನ್ನಿಲ್ಲದ ಕಾಟ ಕೊಡುತ್ತಿದೆ.
ಮಳೆಯಿಂದಾಗಿ ಸಾವಿರಾರು ರೂ. ವ್ಯಯಿಸಿ ಬೆಳೆದಿರುವ ಬೆಳೆ ಮಣ್ಣುಪಾಲಾಗುತ್ತಿದೆ. ಬೆಳೆಗೆ ಬೇಕಾದ ಪ್ರಮಾಣದಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲು ಬೀಳುತ್ತಿಲ್ಲ. ಮೊಡ ಕವಿದ ವಾತಾವರಣ ಹಾಗೂ ಮಳೆಯಿಂದಾಗಿ ತೇವಾಂಶ ಪ್ರಮಾಣ ಹೆಚ್ಚಾಗಿ ಬೆಳೆಗಳು ರೋಗಕ್ಕೆ ತುತ್ತಾಗಿದೆ. ಭತ್ತಕ್ಕೆ ಸುಳಿ ರೋಗ ಕಾಣಿಸಿಡಿದ್ದು, ಕಾಂಡದಲ್ಲಿಯೇ ಬೆಳೆ ರೋಗಕ್ಕೆ ತುತ್ತಾಗುತ್ತಿದೆ. ಇನ್ನು ರೋಗದ ನಿಯಂತ್ರಣಕ್ಕೆ ಸಾವಿರಾರು ರೂ. ಬೆಲೆ ಬಾಳುವ ಕ್ರಿಮಿನಾಶಕ ಸಿಂಪಡಿಸಿದರೂ ಹತೋಟಿಗೆ ಬಾರದ ಕಾರಣ ರೈತರ ದುಗುಡ ಹೆಚ್ಚಾಗಿದೆ.
ಬಹುತೇಕ ರೈತರು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದಾರೆ. ಎಕರೆಗೆ ಕನಿಷ್ಠ 15-17 ಮೂಟೆ ಭತ್ತವನ್ನು ಗುತ್ತಿಗೆ ರೂಪದಲ್ಲಿ ನೀಡಬೇಕು. ಬೆಳೆ ನಿರ್ವಹಣೆಗೆ ಸಾಕಷ್ಟು ಹಣ ವ್ಯಯಿಸಿದ್ದು, ಬೆಳೆ ಕೈಗೆ ಬರುವ ಮುನ್ನವೇ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಮೀನುಗಳ ಮಾಲೀಕರಿಗೆ ಗುತ್ತಿಗೆ ನೀಡಿ, ತಾವೇನು ಉಳಿಸಿಕೊಳ್ಳಬೇಕು ಎನ್ನುವುದು ಕೃಷಿಕರ ಪ್ರಶ್ನೆಯಾಗಿದೆ.
ಮಳೆ ಹೊಡೆತಕ್ಕೆ ಅಪಾರ ಪ್ರಮಾಣದ ಭತ್ತದ ಬೆಳೆ ನೆಲಕಚ್ಚಿದೆ. ಬೆಳೆಗಳ ನಿರ್ವಹಣೆಗೆ ಸಾವಿರಾರು ರೂ. ವ್ಯಯಿಸಿದ್ದು, ಈಗ ಸಂಕಷ್ಟಕ್ಕೆ ಸಿಲುಕಿದ್ದೇವೆ. ರೈತರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಳೆ ನಷ್ಟಕ್ಕೆ ಸರ್ಕಾರ ಎಕರೆಗೆ 25-30 ಸಾವಿರ ರೂ. ಪರಿಹಾರ ನೀಡಬೇಕು. ಆಗ ಮಾತ್ರ ಸಂಕಷ್ಟದಿಂದ ಪಾರಾಗಲು ಸಾಧ್ಯ. | ಶರಣಪ್ಪ, ಮಲ್ಲನಗೌಡ, ಶರಣಬಸವ, ರಾಜಶೇಖರ ಭತ್ತ ಬೆಳೆಗಾರರು