ಅಧಿಕಾರಿಗಳೇ ಆಶ್ವಾಸನೆ ಬೇಡ, ಪರಿಹಾರ ಬೇಕು

Siddapur PT, Village, Farmers Protest, Canal, Land, Victims,
ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿಟಿ ಗ್ರಾಮದ ರೈತರು ಕಾಲುವೆಗೆ ಮಣ್ಣು ಹಾಕಿ ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಪಿಎಸ್‌ಐ ಆರೀಫ್ ಮುಶಾಪುರಿ, ಕೆಬಿಜೆಎನ್‌ಎಲ್ ಅಧಿಕಾರಿಗಳಾದ ಆರ್.ಎಲ್. ಹಳ್ಳೂರ, ಶಿವಾನಂದ ಸಾಗರ, ಅಬೂಬಕ ಬಾಗವಾನ ಮಾತುಕತೆ ನಡೆಸಿದರು.
Published on

ಮುದ್ದೇಬಿಹಾಳ: ಚಿಮ್ಮಲಗಿ ಏತ ನೀರಾವರಿ ಎಡದಂಡೆ ಕಾಲುವೆಗಾಗಿ ಜಮೀನು ಕಳೆದುಕೊಂಡ ತಾಲೂಕಿನ ಸಿದ್ದಾಪುರ ಪಿಟಿ ಗ್ರಾಮದ ರೈತರು ಪರಿಹಾರಕ್ಕಾಗಿ ಒತ್ತಾಯಿಸಿ ಕಾಲುವೆಗೆ ಮಣ್ಣು ಹಾಕಿ ನೀರು ಬಂದ್ ಮಾಡಿ ಶನಿವಾರ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಲುವೆಗೆ ಹಾಕಿರುವ ಮಣ್ಣು ತೆರವುಗೊಳಿಸುವಂತೆ ರೈತರ ಮನವೊಲಿಕೆಗೆ ಮುಂದಾದರು. ಇದಕ್ಕೊಪ್ಪದ ರೈತರು ಪರಿಹಾರ ದೊರೆಯುವವರೆಗೂ ಕಾಲುವೆಯಲ್ಲಿನ ಮಣ್ಣು ತೆರವುಗೊಳಿಸುವುದಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

ದ್ದಾಪುರ ಪಿಟಿ ಗ್ರಾಮದ ರೈತರಾದ ಗುರು ರಾಯಗೊಂಡ, ವಿಠ್ಠಲ ಹಾಲ್ಯಾಳ ಮಾತನಾಡಿ, ಚಿಮ್ಮಲಗಿ ಏತ ನೀರಾವರಿ ಯೋಜನೆಯ ಎಡದಂಡೆ ಕಾಲುವೆಯ ಹೆಚ್ಚುವರಿ ಕ್ಷೇತ್ರದ 0.484 ರಿಂದ 2.193 ಕಿಲೋ ಮೀಟರ್‌ವರೆಗೆ ಯಾವುದೇ ರೈತರಿಗೆ ಪರಿಹಾರ ಬಂದಿಲ್ಲ. ಕಾಲುವೆ ನಿರ್ಮಾಣವಾಗಿ 13 ವರ್ಷಗಳು ಕಳೆದರೂ ಅಧಿಕಾರಿಗಳು ಕೇವಲ ಆಶ್ವಾಸನೆ ನೀಡುತ್ತಾ ಬಂದಿದ್ದಾರೆ. ಈಗ ಪ್ರತಿಭಟನೆ ನಡೆಸುವುದನ್ನು ಅರಿತು ಆರು ತಿಂಗಳು ಸಮಯ ಕೇಳುತ್ತಿದ್ದಾರೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಪೊಲೀಸರನ್ನು ಮುಂದಿಟ್ಟುಕೊಂಡು ರೈತರನ್ನು ಬೆದರಿಸುವ ತಂತ್ರದಲ್ಲಿ ತೊಡಗಿದ್ದಾರೆ. ಭೂಮಿ ಕಳೆದುಕೊಂಡವರ ಕಷ್ಟ ಅಧಿಕಾರಿಗಳಿಗೆ ಅರಿವಿದೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾವು ಕಳೆದುಕೊಂಡಿರುವ ಜಮೀನಿಗೆ ಪರಿಹಾರ ದೊರೆಯುವವರೆಗೂ ಹೋರಾಟ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ರೈತರಿಗೆ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಕಾಲುವೆಯಲ್ಲಿರುವ ಮಣ್ಣು ತೆಗೆಯಲು ಮುಂದಾದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.

ಅಧಿಕಾರಿಗಳು ನಡೆಸಿದ ಮನವೊಲಿಕೆ ಕಾರ್ಯ ವಿಫಲವಾಗಿದ್ದು ರೈತರ ಪ್ರತಿಭಟನೆ ಮುಂದುವರಿದಿದೆ. ಸಂತ್ರಸ್ತ ರೈತರಾದ ಶಾಂತಪ್ಪ ಬ್ಯಾಕೋಡ, ಗುರು ಗೋಡಿಕಾರ, ಸಿದ್ದಪ್ಪ ಸೋಮನಾಳ, ಶಿವಾನಂದ ಬಾಗೇವಾಡಿ, ಮುತ್ತಪ್ಪ ಗೋಡಿಕಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net