1408 ಹೆಕ್ಟೇರ್ ಭತ್ತದ ಬೆಳೆಹಾನಿ

Siddapur Paddy crop damage visit minister tangadagi
ಸಿದ್ದಾಪುರ ಸಮೀಪದ ಬೆನ್ನೂರು ಗ್ರಾಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭತ್ತದ ಬೆಳೆ ಹಾನಿ ಪರಿಶೀಲಿಸಿದರು. ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ಲು, ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಬೆನ್ನೂರು ಗ್ರಾಪಂ ಅಧ್ಯಕ್ಷ ಬಸಪ್ಪ, ಮುಖಂಡರಾದ ಗವಿಸಿದ್ದಪ್ಪ, ಮಲ್ಲನಗೌಡ, ಶರಣಪ್ಪ ಸಾಹುಕಾರ, ಶರಣೇಗೌಡ ಪೊಲೀಸ್ ಪಾಟೀಲ್ ಇದ್ದರು.
Published on

ಸಿದ್ದಾಪುರ: ಅಖಂಡ ಗಂಗಾವತಿ ತಾಲೂಕಿನಲ್ಲಿ (ಕಾರಟಗಿ, ಕನಕಗಿರಿ, ಗಂಗಾವತಿ) ಒಟ್ಟು 1408.15 ಹೆಕ್ಟೇರ್ ಭತ್ತದ ಬೆಳೆ ಹಾನಿಗೊಳಗಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಗ್ರಾಮ ಸಮೀಪದ ಉಳೇನೂರು, ಉಳೇನೂರು ಕ್ಯಾಂಪ್, ಬೆನ್ನೂರು ಗ್ರಾಮದಲ್ಲಿ ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಭತ್ತದ ಬೆಳೆ ವೀಕ್ಷಿಸಿ ಶನಿವಾರ ಮಾತನಾಡಿದರು. ಕಿತ್ತೂರು ಉತ್ಸವಕ್ಕೆ ತೆರಳಿದ ವೇಳೆ ನಮ್ಮಲ್ಲಿನ ಬೆಳೆಹಾನಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ರೈತರು ಯಾವುದೇ ಕಾರಣಕ್ಕೂ ಹೆದರುವ ಅಈಶ್ಯಕತೆಯಿಲ್ಲ ಎಂದು ಧೈರ್ಯ ತುಂಬಿದರು. ಕಳೆದ ಬಾರಿ ಬೆಳೆಹಾನಿ ಪರಿಹಾರ ಬಹುತೇಕ ರೈತರಿಗೆ ದೊರೆತಿಲ್ಲ ಎಂಬ ದೂರುಗಳಿದ್ದು, ಶೀಘ್ರವೇ ವಿತರಣೆ ಕಾರ್ಯ ನಡೆಯಲಿದೆ.

ಸಿದ್ದಾಪುರದಿಂದ ಬೆನ್ನೂರುವರೆಗಿನ ರಸ್ತೆ ಅಭಿವೃದ್ಧಿಗೆ 6 ಕೋಟಿ ರೂ. ಮೀಸಲಿಡಲಾಗಿದ್ದು, ಶೀಘ್ರವೇ ಕೆಲಸ ಪ್ರಾರಂಭವಾಗಲಿದೆ. ಭತ್ತದ ದಾಸ್ತಾನು ಸಾಗಟಕ್ಕೆ ಸಮಸ್ಯೆ ಆಗಬಾರದೆಂದು ಪ್ಯಾಟ್ ವರ್ಕ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಸರ್ಕಾರ ಎರಡು ಇಲಾಖೆಗಳ ಜವಾವ್ದಾರಿ ನೀಡಿರುವುದರಿಂದ ಕಾರ್ಯದ ಒತ್ತಡ ಹೆಚ್ಚಿದೆ. ಅಲ್ಲದೆ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅ.28ರೊಳಗೆ ಅಂತಿಮಗೊಳಿಸಬೇಕು. ಹೀಗಾಗಿ ನನ್ನ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಲು ಸಾಧ್ಯವಾಗಿಲ್ಲ. ಗ್ರಾಪಂ ಅಧ್ಯಕ್ಷರಿಗೆ ನೀವೇ ಪೂಜೆ ನೆರವೇರಿಸಿ ಎಂದಿದ್ದೇನೆ ಎಂದು ತಿಳಿಸಿದರು.

ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ರಡ್ಡಿ, ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಬೆನ್ನೂರು ಗ್ರಾಪಂ ಅಧ್ಯಕ್ಷ ಬಸಪ್ಪ, ಮುಖಂಡರಾದ ಗವಿಸಿದ್ದಪ್ಪ, ಮಲ್ಲನಗೌಡ, ಶರಣಪ್ಪ ಸಾಹುಕಾರ, ಶರಣೇಗೌಡ ಪೊಲೀಸ್ ಪಾಟೀಲ್, ಚಂದ್ರಶೇಖರಗೌಡ ಪೊಲೀಸ್ ಪಾಟೀಲ್, ಅಂಬಣ್ಣ ನಾಯಕ, ಕೆ. ಸಿದ್ದನಗೌಡ, ಹುಲಗಪ್ಪ ಪಾಳೆ, ವಿರೂಪಾಕ್ಷಿ ವಡ್ಡಿನ್, ಡಾ. ಕೆ.ಎನ್. ಪಾಟೀಲ್, ಬೀರಪ್ಪ, ಹನುಮಂತಪ್ಪ ಶಾಲಿಗನೂರು, ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಕೃಷಿ ಇಲಾಖೆ ಎ.ಡಿ ಸಂತೋಷ್ ಪಟ್ಟದಕಲ್ಲು, ಕೃಷಿ ಅಧಿಕಾರಿ ಮಾರುತಿ ಇತರರಿದ್ದರು.

ನವೆಂಬರ್ ಮೊದಲವಾರ ಸಭೆ

ಎರಡನೇ ಬೆಳೆಗೆ ನೀರು ಹರಿಸುವ ಸಾಧ್ಯತೆಗಳ ಕುರಿತು ನವೆಂಬರ್ ಮೊದಲ ವಾರ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲಾಗುವುದು. ಈ ಕುರಿತು ಪಕ್ಕದ ಜಿಲ್ಲೆಗಳ ಸಚಿವರ ಜತೆ ಮಾತುಕತೆ ನಡೆಸಿದ್ದೇನೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಸಭೆಯಲ್ಲಿ ಕೂಲಂಕಷವಾಗಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಮೂರೂ ಕ್ಷೇತ್ರದಲ್ಲಿ ನಾವೇ ಗೆಲ್ತೇವೆ

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ನನಗೆ ಸಂಡೂರು ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ಮೂರು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಅಜ್ಜಂಫೀರ್ ಖಾದ್ರಿ ಬಂಡಾಯವೆದಿಲ್ಲ. ಅವರ ಮನವೊಲಿಸಿ ನಾಮಪತ್ರ ಹಿಂಪಡೆಯುತ್ತೇವೆೆ ಎಂದು ಸಚಿವ ತಂಗಡಗಿ ಹೇಳಿದರು.

ಹದಿನೇಳು ಸಾವಿರ ರೂ. ಪರಿಹಾರ ಭರವಸೆ

ಕಾರಟಗಿ ತಾಲೂಕಿನ ಬೆಳೆ ಹಾನಿ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕನ ಮಾಡಿದ್ದೇನೆ. ಎನ್ ಡಿಆರ್‌ಎಫ್ ನಿಯಮಗಳ ಪ್ರಕಾರ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾದರೆ ಹೆಕ್ಟೇರ್‌ಗೆ 17ಸಾವಿರ ರೂ. ಪರಿಹಾರ ವಿತರಣೆಗೆ ಅವಕಾಶವಿದೆ. ಈಗಾಗಲೇ, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ. ಶೀಘ್ರವೇ ರೈತರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಸಚಿವ ಶಿವರಾಜ ತಂಗಡಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net