ಭರದಿಂದ ಸಾಗಿದೆ ಜಂಗಲ್ ಕಟಿಂಗ್

JUNGLE CUTTING
Published on

ರಮೇಶ ಹಾರ್ಸಿಮನೆ ಸಿದ್ದಾಪುರ
ಹೆಸ್ಕಾಂ ಇಲಾಖೆ ನಿರಂತರ ವಿದ್ಯುಸಂಪರ್ಕ ನೀಡು ವುದಕ್ಕೆ ಯಾವುದೇ ಅಡಚಣೆ ಉಂಟಾಗಬಾರದೆಂದು ಜಂಗಲ್ ಕಟಿಂಗ್ ಕಾಮಗಾರಿಯನ್ನು ಬರದಿಂದ ನಡೆಸುತ್ತಿದೆ.
ತಾಲೂಕಿನಲ್ಲಿ ಒಟ್ಟು 12ಪೀಡರ್‌ಗಳಿಂದ ವಿದ್ಯುತ್ ಪೂರೈಸಲಾಗುತ್ತಿದೆ. ಸಾಗರ ತಾಲೂಕಿನ ಜೋಗ ಉಪಕೇಂದ್ರದಿಂದ ಆಡುಕಟ್ಟಾ ಗ್ರಾಪಂ ವ್ಯಾಪ್ತಿಗೆ ಹಾಗೂ ಮಾವಿನಗುಂಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಇನ್ನುಳಿದ 11 ಪೀಡರ್‌ಗಳಿಗೆ 110/11ಕೆ.ವಿ ಸಿದ್ದಾಪುರ ಉಪಕೇಂದ್ರ ನೀಡಲಾಗುತ್ತಿದೆ. ಬಹುತೇಕ ಎಲ್ಲ ಪೀಡರ್‌ಗಳ ತಂತಿ ಮಾರ್ಗ ಮುಖ್ಯರಸ್ತೆ ಹಾಗೂ ಗ್ರಾಮೀಣ ರಸ್ತೆಯ ಪಕ್ಕದಲ್ಲಿಯೇ ಹಾದು ಹೋಗಿದ್ದರೆ ಇನ್ನು ಕೆಲವೆಡೆ ಗುಡ್ಡ, ಬೆಟ್ಟದಲ್ಲಿಯೂ ತಂತಿ ಮಾರ್ಗ ಇದೆ. ಈ ಎಲ್ಲ ಕಡೆಗಳಲ್ಲಿ ಗಿಡ-ಮರ ಹಾಗೂ ಬಳ್ಳಿಗಳು ವಿದ್ಯುತ್ ಸಂಕರ್ಪಕ್ಕೆ ತೊಡಕುಂಟು ಮಾಡುತ್ತಿರುವುದರಿಂದ ಜಂಗಲ್ ಕಟಿಂಗ್ ಕಾಮಗಾರಿ ಜೋರಾಗಿ ನಡೆಯುತ್ತಿದೆ.
ತಾಲೂಕಿನಲ್ಲಿ ಸುಮಾರು 900ರಿಂದ 1000 ಕಿ.ಮೀ ಎಚ್‌ಟಿ ಲೈನ್ ಹಾಗೂ ಅಂದಾಜು 2350 ಕಿ.ಮೀ. ಎಲ್‌ಟಿ ಲೈನ್ ಹಾದು ಹೋಗಿದೆ. ನಿತ್ಯ ಎರಡು ತಂಡದ ಮೂಲಕ ಜಂಗಲ್ ಕಟಿಂಗ್ ಕಾಮಗಾರಿ ನಡೆಯುತ್ತಿದೆ. ವಿದ್ಯುತ್ ತಂತಿಗೆ ತಾಗಬಹುದಾದ, ತಾಗಿರುವ ಹಾಗೂ ಮಳೆಗಾಲದಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳ ಮೇಲೆ ಬೀಳಬಹುದಾದ ಮರಗಳನ್ನು, ಮರಗಳ ಟೊಂಗೆಗಳನ್ನು ತೆರವು ಮಾಡಲಾಗುತ್ತಿದೆ.
ಗ್ರಾಹಕರಿಗೆ ತಪ್ಪದ ತಪ್ಪದ ಕಿರಿ ಕಿರಿ: ತಿಂಗಳಲ್ಲಿ ಒಂದೆರಡು ಬಾರಿ 110/11ಕೆ.ವಿ ಸಿದ್ದಾಪುರ ಉಪಕೇಂದ್ರದಲ್ಲಿ ದುರಸ್ತಿ, ಜಂಗಲ್ ಕಟಿಂಗ್, ಎಲ್‌ಸಿ, ಲೈನ್ ಟ್ರಿಪ್ ಮತ್ತಿತರ ಕಾರಣಗಳಿಂದ ನಿತ್ಯ ಹತ್ತಾರು ಸಲ ವಿದ್ಯುತ್ ಕಣ್ಣುಮುಚ್ಚಾಲೆ ಆಗುತ್ತಿರುವುದರಿಂದ ಗ್ರಾಹಕರಿಗೆ ಕಿರಿ ಕಿರಿ ಉಂಟಾಗುತ್ತಿದೆ ಎನ್ನುವ ಆಕ್ಷೇಪ ಕೇಳಿಬರುತ್ತಿದೆ.
ಅಧಿಕಾರಿಗಳಿಗೂ ಸಂಕಟ: ವಿದ್ಯುತ್ ತಂತಿಯ ಮೇಲೆ ಇರುವ ಮರದ ಟೊಂಗೆಗೆಗಳನ್ನು ಒಂದೆಡೆಯಿಂದ ಕಟಿಂಗ್ ಮಾಡುತ್ತ ಬಂದರೂ ಜೋರಾಗಿ ಬೀಸುವ ಗಾಳಿ ಹಾಗೂ ಮಳೆಗೆ ಜಂಗಲ್ ಕಟಿಂಗ್ ಮಾಡಿದ ಸ್ಥಳದಲ್ಲಿಯೇ ಮರಗಳ ಟೊಂಗೆ ಬಿದ್ದು ಸೇರಿದಂತೆ ಮತ್ತಿತರ ಕಾರಣಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತಿರುವುದರಿಂದ ಇಲಾಖೆಯ ಅಧಿಕಾರಿಗ ಳಿಗೆ ಹಾಗೂ ಸಿಬ್ಬಂದಿಗಳಿಗೂ ಕಿರಿ ಕಿರಿ ತಪ್ಪದಂತಾಗಿದೆ.
ಮೂರು ತಿಂಗಳಲ್ಲಿ 30ಲಕ್ಷ ರೂ. ಗಳಷ್ಟು ಹಾನಿ: ಏಪ್ರಿಲ್ -2023ರಿಂದ ಇಂದಿನವರೆಗೆ ತಾಲೂಕಿನಲ್ಲಿ ಆಗಾಗ ಬಿದ್ದ ಮಳೆ ಹಾಗೂ ಬೀಸಿದ ಗಾಳಿಗೆ 81 ವಿದ್ಯುತ್ ಕಂಬ, 26 ಟಿಸಿಗಳು ಹಾಳಾಗಿದೆ. ಅಂದಾಜು 30 ಲಕ್ಷ ರೂ.ಗಳಷ್ಟು ಹಾನಿ ಉಂಟಾಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೂ ಗ್ರಾಹಕರಿಗೆ ತೊಂದರೆ ಆಗದಂತೆ ವಿದ್ಯುತ್ ಸಂಪರ್ಕವನ್ನು ಹೆಸ್ಕಾಂ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net