

ಸಿದ್ದಾಪುರ: ಗಾಳಿ-ಮಳೆಯಿಂದಾಗಿ ತಾಲೂಕಿನ ಹಲವೆಡೆ ರಸ್ತೆ ಹಾಗೂ ವಿದ್ಯುತ್ ತಂತಿ ಮೇಲೆ ಮರಗಳು ಬೀಳುತ್ತಿವೆ. ಇವುಗಳನ್ನು ತೆರವುಗೊಳಿಸುವ ಲೋಕೋಪಯೋಗಿ, ಅರಣ್ಯ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಂದ ಮರದ ತುಂಡುಗಳು ರಸ್ತೆಗೆ ತಾಗಿಯೇ ಇಡುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ.
ತಾಲೂಕಿನ ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆಯ ಮಾದಲಮನೆ ಬಸ್ ನಿಲ್ದಾಣದ ಸಮೀಪ ವಿದ್ಯುತ್ ತಂತಿ ಮೇಲೆ ಕಾಡು ಜಾತಿಯ ಮರವೊಂದು ಬಿದ್ದು ಹಾನಿ ಸಂಭವಿಸಿದೆ. ತಂತಿ ಮೇಲೆ ಬಿದ್ದ ಮರ ತೆರವುಗೊಳಿಸಲಾಗಿದೆ. ಆದರೆ ಮರ ತೆರವುಗೊಳಿಸಿದ ನಂತರ ಸಂಚಾರಕ್ಕೆ ತೊಂದರೆ ಆಗದಂತೆ ರಸ್ತೆಯ ಪಕ್ಕದಲ್ಲಿ ಸರಿಯಾಗಿ ಇಟ್ಟಿಲ್ಲ. ಅವುಗಳನ್ನು ರಸ್ತೆಗೆ ತಾಗಿಯೇ ಇಟ್ಟಿರುವುದರಿಂದ ನಿತ್ಯ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಬಿದ್ದ ಮರವನ್ನು ತೆರವುಗೊಳಿಸುವ ಅರಣ್ಯ, ಲೋಕೋಪಯೋಗಿ ಹಾಗೂ ಹೆಸ್ಕಾಂ ಇಲಾಖೆ ಅಧಿಕಾರಿಗಳು ವಿವಿಧೆಡೆ ರಸ್ತೆಗೆ ತಾಗಿಕೊಂಡಿರುವ ಮರದ ತುಂಡುಗಳನ್ನು ರಸ್ತೆ ಬದಿಗೆ ಹಾಕಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮಾದಲಮನೆ ಗ್ರಾಮದ ಮಂಜುನಾಥಗೌಡ, ಭಾಸ್ಕರಗೌಡ, ಕೊಳಗಿಜಡ್ಡಿಯ ದಿನೇಶ ಹೆಗಡೆ ಇತರರು ಆಗ್ರಹಿಸಿದ್ದಾರೆ.