

ಸಿದ್ದಾಪುರ: ಗ್ರಾಪಂನಲ್ಲಿ 2023-24ನೇ ಸಾಲಿನ 15ನೇ ಹಣಕಾಸು ಯೋಜನೆ, ನರೇಗಾ ಯೋಜನೆ ಮತ್ತು ಕುಡಿಯುವ ನೀರಿನ ಕಾಮಗಾರಿಯಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಲ ಗ್ರಾಪಂ ಸದಸ್ಯರು ಪಂಚಾಯಿತಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಬೋರ್‌ವೇಲ್ ಮತ್ತು ಪೈಪ್‌ಲೈನ್ ದುರಸ್ತಿ ಹೆಸರಲ್ಲಿ ಮತ್ತೊಮ್ಮೆ ಅದೇ ಕಾಮಗಾರಿಗಳ ಫೋಟೋ ಬಳಸಿಕೊಂಡು 15ನೇ ಹಣಕಾಸಿನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿ ಪಿಡಿಒ ಮತ್ತು ಈಗಿನ ಅಧ್ಯಕ್ಷೆ ಶಿವಗಂಗಾ ಅವರು ಲಕ್ಷಾಂತರ ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಿನ ಪಿಡಿಒ ಜ್ಯೋತಿರೆಡ್ಡಿ ಅವರನ್ನು ಮಾಹಿತಿ ಕೆಳಲು ಹೋದಾಗ ಸ್ಥಳದಲ್ಲಿದ್ದ ಗ್ರಾಪಂ ಅಧ್ಯಕ್ಷೆ ಪತಿ ಪಂಪಾಪತಿ ಕೆಲ ಸದಸ್ಯರ ಜೊತೆಗೂಡಿ ನಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ.
ಈ ದೃಶ್ಯ ಪಂಚಾಯಿತಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಆರೋಪಿಸಿದರು. ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷೆ ಮತ್ತು ಅಧ್ಯಕ್ಷೆಯ ಪತಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಪ್ರಮೋದ ಬಾವಿ, ಚಂದ್ರಶೇಖರ ಭೋವಿ, ಶರಣಪ್ಪ ವದ್ದಿಗೇರಿ, ಅಜುಮುದ್ದೀನ್, ಗ್ರಾಮಸ್ಥರಾದ ಮೌಲಸಾಬ್, ಕನಕಪ್ಪ ಹುನೂರು, ದೇವರಾಜ ಚಾಜಿ, ಮಾರುತೆಪ್ಪ, ಬಾಷಾ ಇತರರಿದ್ದರು.