ಆದಾಯವಿದ್ದರೂ ಅಭಿವೃದ್ಧಿ ಶೂನ್ಯ

sabhe
Published on

ವಿಜಯವಾಣಿ ಸುದ್ದಿಜಾಲ ಸಿದ್ದಾಪುರ

ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ಇತ್ತೀಚೆಗೆ ಸಿದ್ದಾಪುರ ಗ್ರಾ.ಪಂ. 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆ ನಡೆಯಿತು.

ಗ್ರಾಮಸ್ಥರ ಹಾಗೂ ಗ್ರಾ.ಪಂ. ಸದಸ್ಯರ ವಿರೋಧದ ನಡುವೆಯೂ ಪಿಡಿಒ ರಾತ್ರಿ ಪೂರ್ತಿ ಹೋಟೆಲ್ ತೆರೆಯಲು ಪರವಾನಗಿ ನೀಡಿರುವುದು ತಪ್ಪು. ರಾತ್ರಿ ಸಮಯದಲ್ಲಿ ಹೋಟೆಲ್ ಮುಂಭಾಗದಲ್ಲಿ ಅಪಘಾತ ಸಂಭವಿಸುತ್ತಿದೆ. ಪೇಟೆಯ ಒಳಚರಂಡಿ ಗಬ್ಬೆದ್ದು, ನಾರುತ್ತಿದ್ದರೂ ಕ್ರಮಕೈಗೊಂಡಿಲ್ಲ. ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದನೆ ನೀಡದೆ ಬೇಜವಾಬ್ದಾರಿ ಕೆಲಸ ಮಾಡುತ್ತಿರುವ ಪಿಡಿಒ ನಾಗೇಂದ್ರ ಅವರನ್ನು ತರಾಟೆ ತೆಗೆದುಕೊಂಡರು. ಪ್ರತಿ ಗ್ರಾಮ ಸಭೆಯಲ್ಲಿ ಪ್ರಶ್ನೆ ಹಾಗೂ ದೂರು ಬಂದರೂ ಕ್ರಮ ಶೂನ್ಯ ಎಂದು ಗ್ರಾಮಸ್ಥರು ಆಕ್ರೋಶಗೊಂಡರು.

ಜೆಜೆಎಂ ಕುಡಿಯುವ ನೀರಿನ ಅಸಮರ್ಪಕ ಪೈಪ್‌ಲೈನ್, ಕಳಪೆ ಗುಣಮಟ್ಟದ ನಳ್ಳಿ ಅಳವಡಿಕೆ, ಅರಣ್ಯ ಇಲಾಖೆ, ವನ್ಯಜೀವಿ ವಿಭಾಗದಿಂದ ಜನರಿಗೆ ಅನಾವಶ್ಯಕ ತೊಂದರೆ, ಎಸ್‌ಎಲ್‌ಆರ್‌ಎಂ ಘಟಕದಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಬೆಂಕಿ ತಗುಲಿದ್ದರೆ ಪೇಟೆಗೆ ಅಪಾಯ. ಸಿದ್ದಾಪುರ ವೈದ್ಯರು ಕೊರತೆ, ಹಕ್ಕುಪತ್ರ ಸಿಗುತ್ತಿಲ್ಲ. ಸಿದ್ದಾಪುರದಲ್ಲಿ ಪದವಿ ಪೂರ್ವ ಕಾಲೇಜು ನಿರ್ಮಾಣಕ್ಕೆ ಆಗ್ರಹ, ಸಿದ್ದಾಪುರ ಪೇಟೆ, ಅಸಮರ್ಪಕ ವಾಹನ ಪಾರ್ಕಿಂಗ್, ರಸ್ತೆಯಲ್ಲಿ ವ್ಯಾಪಾರ, ಮೀನಿನ ನೀರು ರಸ್ತೆಗೆ, ಜನ್ಸಾಲೆ ಅಂಬೇಡ್ಕರ್ ಯುವಕ ಮಂಡಲಕ್ಕೆ ಗ್ರಾ.ಪಂ. ಪರವಾನಗಿ ನೀಡಿಲ್ಲ, ಸಿದ್ದಾಪುರ ಬಸ್ ನಿಲ್ದಾಣ ಅಕ್ಕಪಕ್ಕಗಳಲ್ಲಿ ಪುಂಡರ ಕಾಟ. ಚೀನಾಬೇರು ರಸ್ತೆ ಅಭಿವೃದ್ಧಿ ಬೇಡಿಕೆ, ಅಪಾಯಕಾರಿ ಮರಗಳ ತೆರವು, ಗ್ರಾ.ಪಂ. ಜಿಪಿಎಸ್ ಮಾಡಲು ಗ್ರಾಮಸ್ಥರಿಂದ ಹಣ ಬೇಡಿಕೆ ಇಡುತ್ತಿದ್ದಾರೆ ಎನ್ನುವ ಆರೋಪ, ಇನ್ನಿತರ ವಿಷಯಗಳ ಬಗ್ಗೆ ಗ್ರಾಮಸ್ಥರು ಅಹವಾಲು ಗ್ರಾಮಸಭೆ ಮುಂದಿಟ್ಟರು.

ಗ್ರಾಮಸ್ಥರ ಪರವಾಗಿ ಸುದರ್ಶನ ಶೆಟ್ಟಿ ಬಾಳೆಬೇರು, ಹರ್ಷ ಮೇಲ್ಜೆಡ್ಡು, ರಾಘವೇಂದ್ರ ಕೊಠಾರಿ, ಶೇಖರ ಕೊಟ್ಯಾನ್, ನಾಗರಾಜ ಚೋನಾಳಿ, ಮಾಲತಿ ಶೆಟ್ಟಿ, ಕುಶಲ ಶೆಟ್ಟಿ, ಜಯರಾಮ ಶೆಟ್ಟಿ ಹೆಗ್ಗೇರಿ ಮಾತನಾಡಿದರು. ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಮಾರ್ಗದರ್ಶಿ ಅಧಿಕಾರಿಯಾಗಿ ಭಾಗವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷೆ ಶ್ರೀಲತಾ ಶೆಟ್ಟಿ ಕಡ್ರಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಕೃಷ್ಣ ಪೂಜಾರಿ, ಸದಸ್ಯರಾದ ಶೇಖರ ಕುಲಾಲ, ಪ್ರದೀಪ ಹೆಗ್ಡೆ, ಶೋಭಾ ಪೂಜಾರಿ, ಗೋಪಾಲ ಶೆಟ್ಟಿ, ಮಂಜುನಾಥ ಕುಲಾಲ, ಚಂದ್ರಾವತಿ ಶೆಟ್ಟಿ, ಗೋಪಾಲ ಕಾಂಚನ್, ಎಚ್.ಭೋಜರಾಜ ಶೆಟ್ಟಿ, ಭಾಸ್ಕರ ಶೆಟ್ಟಿ, ಸಂತೋಷ ಪೂಜಾರಿ, ಜಯಲಕ್ಷ್ಮೀ ಶೆಟ್ಟಿ, ಸಿಂಗಾರಿ, ಪ್ರಮೀಳಾ ನಾಯ್ಕ, ಮಾಲತಿ, ಸರೋಜಾ, ಶಂಕರನಾರಾಯಣ ಪೊಲೀಸ್ ಠಾಣೆ ಸಿಬ್ಬಂದಿ ಶಂಕರ್, ಗ್ರಾಮ ಲೆಕ್ಕಾಧಿಕಾರಿ ಆನಂದ, ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ವಿನಾಯಕ, ಮೆಸ್ಕಾಂ ಜೆಇ ಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶಂಕುತಳಾ, ಕೃಷಿ ಇಲಾಖೆ ಪುರುಷೋತ್ತಮ ಮುತ್ತಿಗೋಡು, ಅರಣ್ಯ ಇಲಾಖೆ ಅಭಿನಂದನ್, ವನ್ಯಜೀವಿ ವಿಭಾಗದ ರವಿ, ಪಶು ಸಂಗೋಪನೆ ಇಲಾಖೆ ಸನಾತ್, ನರೇಗ ಯೋಜನೆ ಇಂಜಿನಿಯರ್ ಪ್ರದೀಪ ಹೆಗ್ಡೆ ಮತ್ತಿತರರಿದ್ದರು. ಪಿಡಿಒ ನಾಗೇಂದ್ರ ಸ್ವಾಗತಿಸಿ, ನಿರೂಪಿಸಿದರು. ಕಾರ್ಯದರ್ಶಿ ಗಜೇಂದ್ರ ವರದಿ ವಾಚಿಸಿದರು. ಸಿಬ್ಬಂದಿ ಉದಯ ಮಡಿವಾಳ ವಂದಿಸಿದರು.

ಸಮಸ್ಯೆಯ ಆಗರ

ಸಭೆಯಲ್ಲಿ ಗ್ರಾಮಸ್ಥರ ಸಂಖ್ಯೆ ತೀರ ಕಡಿಮೆಯಾಗಿದ್ದು ಆಡಳಿತ ಬೇಜವಾಬ್ದಾರಿ ತೋರಿಸುತ್ತದೆ. ಗ್ರಾ.ಪಂ.ಗೆ ಸರ್ಕಾರ ಹಾಗೂ ಇಲಾಖೆಗಳಿಂದ ಸಾಕಷ್ಟು ಅನುದಾನ, ತೆರಿಗೆ ಮೂಲಕ ಆದಾಯ ಬರುತ್ತಿದ್ದರೂ ಅಭಿವೃದ್ಧಿ ಶೂನ್ಯ. ಪೇಟೆಯ ಆಟೋ ನಿಲ್ದಾಣದಲ್ಲಿ ಪಂಚಾಯಿತಿ ಪರವಾನಗಿ ಪಡೆಯದೆ ಬಟ್ಟೆಯಂಗಡಿಯ ಬ್ಯಾನರ್ ಅಳವಡಿಸಿದರೂ ಕ್ರಮಕೈಗೊಂಡಿಲ್ಲ. ಪೇಟೆಯ ಒಳಚರಂಡಿ ಗಬ್ಬೇದ್ದು ನಾರುತ್ತಿದ್ದು, ಕೆಲವೆಡೆ ಚರಂಡಿ ಸ್ಲಾೃಬ್ ಮುರಿದು ಅಪಾಯದ ಮಟ್ಟದಲ್ಲಿದೆ. ರಸ್ತೆ ಬದಿ ನಡೆದು ಬರುತ್ತಿರುವ ಮಗು ಹಾಗೂ ಒಂದು ವಾಹನ ತೆರೆದ ಚರಂಡಿಗೆ ಬಿದ್ದ ಘಟನೆ ಸಂಭಿವಿಸಿದೆ. ಒಳ ಚರಂಡಿ ನೀರು ಕಡ್ರಿಯ ಮಾಣಿ ಕೆರೆ ಹಾಳು ಮಾಡುತ್ತಿದ್ದು ಗ್ರಾ.ಪಂ. ಕ್ರಮ ತೆಗೆದುಕೊಳ್ಳುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net