

ಸಿದ್ದಾಪುರ: ತಾಲೂಕಿನ 473 ಕೃಷಿಕರಿಗೆ ಒಟ್ಟು 12.78 ಲಕ್ಷ ರೂ. ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರವನ್ನು ಶೇ. 8ರ ಬಡ್ಡಿ ಸೇರಿಸಿ ಪಾವತಿಸಬೇಕು ಹಾಗೂ ಪ್ರತಿ ರೈತರಿಗೆ ತಲಾ 2 ಸಾವಿರ ರೂ.ನಂತೆ ಒಟ್ಟು 9.46 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡಿದೆ.
2017-18 ನೇ ಸಾಲಿನಲ್ಲಿ ತಾಲೂಕಿನ ಕಂಚಿಕೈ, ಹೆಗ್ಗರಣಿ ಸೇವಾ ಸಹಕಾರಿ ಸಂಘ ಹಾಗೂ ಶಿರಸಿಯ ಟಿಆರ್ಸಿಯಿಂದ ಬೆಳೆಸಾಲ ಪಡೆದ ನಿಲ್ಕುಂದ ಹಾಗೂ ತಂಡಾಗುಂಡಿ ಭಾಗದ ರೈತರು ಹವಾಮಾನ ಆಧಾರಿತ ಬೆಳೆ ವಿಮೆ ಕಂತು ಪಾವತಿಸಿದ್ದು, ಪರಿಹಾರ ಪಡೆಯಲು ಅರ್ಹರಿದ್ದರೂ ವಿಮಾ ಕಂಪನಿ ಅದನ್ನು ಪಾವತಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಸಹಕಾರ ಸಂಘಗಳ ಮೂಲಕವೇ ರೈತರು 2020ರಲ್ಲಿ ಕಾರವಾರ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು. ಆದರೆ, ವ್ಯಾಜ್ಯವನ್ನು ಧಾರವಾಡ ಆಯೋಗಕ್ಕೆ ವರ್ಗಾಯಿಸಲಾಗಿತ್ತು.
ನಿರಂತರ 6 ವರ್ಷಗಳ ಹೋರಾಟದ ಬಳಿಕ ಕೃಷಿಕರಿಗೆ ಟರ್ಮ್ ಶೀಟ್ನ ಮಾನದಂಡದ ಪ್ರಕಾರ ಪ್ರತಿ ಗುಂಟೆಗೆ 68.50 ರೂ. ಪರಿಹಾರ ನೀಡಬೇಕು. ಅಲ್ಲದೆ, ವ್ಯಾಜ್ಯದ ಖರ್ಚಾಗಿ 30 ಸಾವಿರ ರೂ.ಗಳನ್ನು 45 ದಿನಗಳಲ್ಲಿ ಪಾವತಿಸಬೇಕು ಎಂದು ಆಯೋಗದ ಅಧ್ಯಕ್ಷ ಈಶಪ್ಪ ಕೆ. ಭೂತೆ, ಸದಸ್ಯರಾದ ವಿಶಾಲಾಕ್ಷಿ ಎ. ಬೋಳಶೆಟ್ಟಿ ಮತ್ತು ಪಿ.ಸಿ. ಹಿರೇಮಠ ಆದೇಶಿಸಿದ್ದಾರೆ.
ಸನ್ಮಾನ: ಕಂಚಿಕೈ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ವಿಮೆ ಪರಿಹಾರ ಪಡೆದ ರೈತರ ಸಭೆ ಶನಿವಾರ ನಡೆಯಿತು. ಹೆಗ್ಗರಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಲ್. ಭಟ್ಟ ಉಂಚಳ್ಳಿ ಮಾತನಾಡಿ, ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಜಾಗೃತಗೊಂಡು ಸಮಯೋಚಿತವಾಗಿ ನಡೆಸಿದ ಹೋರಾಟದಿಂದ ಈ ಐತಿಹಾಸಿಕ ಗೆಲುವು ಸಾಧ್ಯವಾಗಿದೆ ಎಂದರು.
ಟಿಆರ್ಸಿ ನಿರ್ದೇಶಕ ಸಂತೋಷಕುಮಾರ ಗೌಡರ್ ಕಸಗೆ ಮಾತನಾಡಿ, ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ಹವಾಮಾನ ಮಾಹಿತಿ ಸಂಗ್ರಹಿಸುವ ಯಂತ್ರಗಳು ಸರಿಯಾಗಿರಬೇಕು. ಮಳೆ, ಹವಾಮಾನ ಮಾಹಿತಿಯನ್ನು ಪ್ರತಿ ಗ್ರಾಪಂಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು. ವಿಮಾ ಪರಿಹಾರ ದೊರಕಿಸಿಕೊಡುವಲ್ಲಿ ಸಹಕರಿಸಿದ ಸಂತೋಷ ಹೆಗಡೆ ಬಿದ್ರಳ್ಳಿ ಅವರನ್ನು ಸನ್ಮಾನಿಸಲಾಯಿತು.