

ರಮೇಶ ಹಾರ್ಸಿಮನೆ ಸಿದ್ದಾಪುರ
ಕಾಲಚಕ್ರ ತಿರುಗಿದ ಹಾಗೆ ರೈತಾಪಿ ಕುಟುಂಬದಲ್ಲಿನ ಕೆಲಸ ಕಾರ್ಯಗಳು ಒಂದೊಂದೇ ಮರೆಯಾಗುತ್ತ ಇತಿಹಾಸದ ಪುಟ ಸೇರುತ್ತಿವೆ. ಕೃಷಿ ಸಂಪ್ರದಾಯಗಳು ದೂರವಾಗುತ್ತಿವೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಾಳೆ ಹೊರೆ ಕಟ್ಟುವುದರ ಬದಲಾಗಿ ಪಿಂಡಿ ಕಟ್ಟುತ್ತಿರುವುದು ಸ್ಪಷ್ಟ ನಿದರ್ಶನವಾಗಿದೆ.
ಅಡಕೆ ಮರದ ಹಾಳೆ, ಹಾಳೆಯ ವಿವಿಧ ಉತ್ಪನ್ನಗಳಿಗೂ ಇಂದು ಎಲ್ಲ ಕಡೆ ಬೇಡಿಕೆ ಇದೆ. ಆದರೂ ಬೆಳೆಗಾರರು ಅದರ ಸಂರಕ್ಷಣೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಅಡಕೆ ಮರದಿಂದ ಒಣಗಿ ಬಿದ್ದ ಸೋಗೆಯನ್ನು ಸರಿಯಾಗಿ ಸೋಗೆ ಅಟ್ಲನಲ್ಲಿ ಜೋಡಿಸಿಡುವುದು ಒಂದು ಕಲೆ. ನಂತರ ಮಳೆಗಾಲ ಆರಂಭವಾಗುತ್ತಿದ್ದಂತೆ (ಮೇ-ಜೂನ್) ಸೋಗೆ ಹಾಗೂ ಹಾಳೆಯನ್ನು ಬೇರ್ಪಡಿಸಿ ಹಾಳೆಯನ್ನು ಕಟ್ಟಿಡುವ ಕೌಶಲವೂ ಅಷ್ಟೇ ಪ್ರಾಮುಖ್ಯವಾಗಿದೆ.
ಹಲವು ವರ್ಷಗಳಿಂದ ಹಾಳೆ ಹೊರೆಯನ್ನು ಕಟ್ಟುವ ಸಂಪ್ರದಾಯ ಮರೆಯಾಗಿ ಕಾಲಕ್ಕೆ ತಕ್ಕಂತೆ ಹಾಳೆ ಪಿಂಡಿಯನ್ನು ಕಟ್ಟುತ್ತಿದ್ದಾರೆ. ಹಾಳೆ ಹೊರೆ ಕಟ್ಟುವುದು ಒಂದು ಕಲೆಯಾಗಿದೆ. ಇಂದಿನ ಯುವ ಕೃಷಿಕರಿಗೆ ಇದರ ಗಂಧ ಗಾಳಿಯೂ ಇಲ್ಲ ಎನ್ನುವುದು ಹಿರಿಯರ ಅಂಬೋಣವಾಗಿದೆ. ಹಿಂದಿನವರು (ಹಿರಿಯರು) ಹಾಳೆ ಹೊರೆಯನ್ನು ಕಟ್ಟಿಟ್ಟರು ಎಂದರೆ ಅದನ್ನು ನೋಡುತ್ತಿರಬೇಕು. ಅಷ್ಟು ಕೌಶಲ ಅವರಲ್ಲಿರುತ್ತಿತ್ತು. ಹಾಳೆ ಹೊರೆಯನ್ನು ಕಟ್ಟುವುದರಲ್ಲಿಯೂ ಸ್ಪರ್ಧೆ ನಡೆಯುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ.
ಆದರೆ, ಇಂದು ಹಾಳೆ ಹೊರೆ ಕಟ್ಟುವ ಸಂಪ್ರದಾಯ ಕಡಿಮೆಯಾಗಿದ್ದು, ಎಲ್ಲೋ ಅಪರೂಪಕ್ಕೆ ಎನ್ನುವಂತೆ ಕೆಲ ರೈತರ ಮನೆಯಲ್ಲಿ ಮಾತ್ರ ಕಂಡುಬರುತ್ತಿದೆ. ಹೀಗೆ ಕಟ್ಟಿಟ್ಟ ಹಾಳೆ ಹೊರೆಯನ್ನು ಮಳೆಗಾಲದಲ್ಲಿ ಹಾಳೆ ಕೊಟ್ಟೆಯನ್ನು ಮಾಡಿ ಅಡಕೆ ಕೊಳೆ ಬರದಂತೆ ಅಡಕೆ ಕೊನೆಗೆ ಕಟ್ಟುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಅಡಕೆ ಕೊನೆಗೆ ಹಾಳೆಕೊಟ್ಟೆ ಕಟ್ಟುವವರೇ ಇಲ್ಲದಂತಾಗಿದೆ.
ಒಂದು ಹಾಳೆ ಹೊರೆಯಲ್ಲಿ ಎಂಬತ್ತರಿಂದ ನೂರು ಹಾಳೆಗಳು ಇರುತ್ತಿದ್ದು, ಎಂಟರಿಂದ ಹತ್ತು ಹಾಳೆಯ ಕವಳಗೆಯನ್ನು ಮಾಡಿ ಕಟ್ಟುವುದು ರೂಢಿಯಲ್ಲಿತ್ತು. ಹಾಳೆ ಹೊರೆಯನ್ನು ಕಟ್ಟುವ ಪೂರ್ವದಲ್ಲಿ ಹಾಳೆಯನ್ನು ಹದ ಮಾಡಿಕೊಳ್ಳುವುದು ಮುಖ್ಯ. ಹಾಳೆಯನ್ನು ಹದ ಮಾಡುವುದಕ್ಕಾಗಿ ಸೋಗೆಯಿಂದ ಹಾಳೆಯನ್ನು ಬೇರ್ಪಡಿಸಿದ ನಂತರ ಒಂದೆರಡು ದಿನಗಳ ಕಾಲ ರಾತ್ರಿಯ ಸಮಯದಲ್ಲಿ ಹರಡಿಡುವುದು. ಹಗಲಿನ ಸಮಯದಲ್ಲಿ ರಾಶಿ ಹಾಕಿಡುವ ರೂಢಿಯೂ ಇತ್ತು. ಈಗ ಹಾಗಿಲ್ಲ. ಸೋಗೆಯಿಂದ ಹಾಳೆಯನ್ನು ಬೇರ್ಪಡಿಸಿದ ದಿನವೇ ಹಾಳೆ ಪಿಂಡಿಯನ್ನು ಕಟ್ಟುವುದು ರೂಢಿಯಾಗಿಬಿಟ್ಟಿದೆ.
ಬೇಕಾದಷ್ಟು ಹಾಳೆ ಇದ್ದರೂ ಹಾಳೆ ಹೊರೆಯನ್ನು ಕಟ್ಟುವುದು ಬಿಟ್ಟು, ಪಿಂಡಿಯನ್ನು ಕಟ್ಟಿ ಮನೆ ಬಳಕೆಯ ಉರುವಲಿಗಾಗಿ ಮಾತ್ರ ಬಳಸುತ್ತಾರೆ. ಉಳಿದದ್ದನ್ನು ತೋಟದಲ್ಲಿಯೇ ಅಡಕೆ ಮರದ ಬುಡದಲ್ಲಿ ಮುಚ್ಚುತ್ತಾರೆ.
ಹಾಳೆಗೆ ಬೇಡಿಕೆ: ಹಾಳೆಯಿಂದ ಹಾಳೆ ಪ್ಲೇಟ್, ಹಾಳೆ ದೊನ್ನೆ, ಹಾಳೆ ಟಪ್ಪಿ ಸೇರಿ ಮತ್ತಿತರ ಬಳಕೆಗೆ ಉಪಯೋಗವಾಗುತ್ತಿದೆ. ಹೀಗಾಗಿ, ಈಗ ಪುನಃ ಹಾಳೆ ಹೊರೆಗೆ ಬೇಡಿಕೆ ಹೆಚ್ಚಿದೆ. ಆದರೆ, ಬೇಡಿಕೆ ಇದ್ದಷ್ಟು ಹಾಳೆ ಸಿಗುತ್ತಿಲ್ಲ ಎನುತ್ತಾರೆ ಉದ್ದಿಮೆದಾರರು.
ಹಾಳೆಯಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವುದರಿಂದ ಹಾಳೆ ಹೊರೆಗೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಕೆಲವೆಡೆ ಯುವ ರೈತರು ಹಾಳೆ ಪಿಂಡಿಯನ್ನು ಬಿಟ್ಟು ಹಾಳೆ ಹೊರೆ ಕಟ್ಟುವುದಕ್ಕೆ ಮುಂದಾಗಿ ಸಂಪ್ರದಾಯವನ್ನು ಉಳಿಸುವುದಕ್ಕೆ ಮುಂದಾಗುತ್ತಿದ್ದಾರೆ.
ಅಡಕೆ ಬೆಳೆಯುವುದೇ ಒಂದು ಸಂಪ್ರದಾಯ. ಇತ್ತೀಚಿನ ವರ್ಷಗಳಲ್ಲಿ ಸಂಪ್ರದಾಯ, ರೂಢಿಗಳೆಲ್ಲ ದೂರವಾಗುತ್ತಿದ್ದು, ಅದು ಅಡಕೆ ಕೃಷಿಯಲ್ಲಿಯೂ ಕಂಡುಬರುತ್ತಿದೆ. ಹಾಳೆ ಹೊರೆಕಟ್ಟುವುದು ಒಂದು ಕೌಶಲ. ಇಂದಿನ ಧಾವಂತದ ದಿನದಲ್ಲಿ ಹಾಳೆ ಪಿಂಡಿ ಕಟ್ಟುವುದಕ್ಕೂ ಸಮಯ ಇಲ್ಲದಂತಾಗಿದೆ. ಉರುವಲಿಗಾಗಿ ಹಾಳೆ ಪಿಂಡಿ ಕಟ್ಟುತ್ತಾರೆ. ಉಳಿದದ್ದನ್ನು ತೋಟದಲ್ಲಿಯೇ ಮುಚ್ಚಿಗೆ ಮಾಡುತ್ತಾರೆ.ನಾರಾಯಣ ಹೆಗಡೆ ವಾಜಗಾರ ಅಡಕೆ ಬೆಳೆಗಾರ