

ಹುಬ್ಬಳ್ಳಿ: ತಾಲೂಕಿನ ಅಮರಗೋಳ ಅಧ್ಯಾಪಕನಗರದಲ್ಲಿರುವ ಶ್ರೀ ಸಿದ್ದಪ್ಪಜ್ಜನ ಮಠದಲ್ಲಿ ಹಠಯೋಗಿ ಶ್ರೀ ಸಿದ್ದಪ್ಪಜ್ಜನವರ 165ನೇ ಜಯಂತಿ ಉತ್ಸವ ನಿಮಿತ್ತ ಜಾತ್ರಾ ಮಹೋತ್ಸವವು ಡಿ. 16ರಿಂದ ಐದು ದಿನಗಳ ವರೆಗೆ ಏರ್ಪಡಿಸಲಾಗಿದೆ.
ನಿತ್ಯ ಸಂಜೆ 7ಕ್ಕೆ ಶಿವಾನುಭವ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿದೆ. ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಮಠಾಧೀಶರು ಪ್ರವಚನ ನೀಡುವರು.
ಡಿ. 16ರಂದು ಸಂಜೆ 7ಕ್ಕೆ ನಡೆಯುವ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಉದ್ಘಾಟಿಸುವರು. ಭಕ್ತ ಮಂಡಳಿ ಅಧ್ಯಕ್ಷ ಕಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ವಿಜಯಪುರ ಶಾಂತಾಶ್ರಮದ ಶ್ರೀ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ ಪಾವನ ಸಾನ್ನಿಧ್ಯ ವಹಿಸುವರು.
ಡಿ. 20ರಂದು ಶ್ರೀ ಸಿದ್ದಪ್ಪಜ್ಜನವರ ಜಯಂತಿ ಅಂಗವಾಗಿ ಬೆಳಗ್ಗೆ 5ಕ್ಕೆ ಲಕ್ಷ್ಮೇಶ್ವರ ಮಠದ ವೇ. ಸೋಮಯ್ಯಶಾಸ್ತ್ರಿಗಳಿಂದ ಅಭಿಷೇಕ, ತೊಟ್ಟಿಲೋತ್ಸವ ಜರುಗಲಿದೆ. ನಂತರ ಕಳಸಾರೋಹಣ, ಉಣಕಲ್ಲ ಮೂಲ ಗದ್ದುಗೆ ಮಠದಿಂದ ಜ್ಯೋತಿ ತರುವ ಕಾರ್ಯಕ್ರಮಗಳು ನಡೆಯಲಿವೆ.
ಮಧ್ಯಾಹ್ನ 12ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಸಿದ್ದಪ್ಪಜ್ಜನವರ ಮೂತಿರ್ಯ ಉತ್ಸವ ಪಲ್ಲಕ್ಕಿ ಮೆರವಣಿಗೆ ಭಜನೆ, ಮಂಗಲವಾದ್ಯಗಳೊಂದಿಗೆ ಅಮರಗೋಳದಲ್ಲಿ ನಡೆಯಲಿದೆ.
ಸಂಜೆ 5.30ಕ್ಕೆ ಮಹಾರಥೋತ್ಸವ ಸಕಲ ವಾದ್ಯಮೇಳದೊಂದಿಗೆ ನಡೆಯಲಿದೆ. ಡಿ. 21ರಂದು ಕಡುಬಿನ ಕಾಳಗ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.