ಸಿದ್ದಪ್ಪಾಜಿ ಜಾತ್ರೆಯಲ್ಲಿ ರುದ್ರಾಕ್ಷಿ ಮಂಟಪೋತ್ಸವ

15-kollegal photo-1,,,,
Published on

ಕೊಳ್ಳೇಗಾಲ: ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ಜಾತ್ರೆಯ ಮೂರನೇ ದಿನವಾದ ಬುಧವಾರ ರುದ್ರಾಕ್ಷಿ ಮಂಟಪೋತ್ಸವ (ಮುಡಿಸೇವೆ)

ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ನೂರಾರು ಭಕ್ತರು ಮುಡಿ ನೀಡಿ ಹರಕೆ ತೀರಿಸಿದ್ದು ವಿಶೇಷವಾಗಿತ್ತು.ರಾಜ ಬೊಪ್ಪೇಗೌಡನ ಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ದೇವರಿಗೆ ಮೊದಲು ಮುಡಿ ಕೂದಲನ್ನು ಅರ್ಪಿಸಿದರು. ನಂತರ ಸಿದ್ದಪ್ಪಾಜಿ ಒಕ್ಕಲಿಗೆ ಸೇರಿದವರು ದೇವರಿಗೆ ಮುಡಿಕಟ್ಟೆಯಲ್ಲಿ ತಲೆ ಕೂದಲನ್ನು ನೀಡಲು ಸಾಲುಗಟ್ಟಿ ನಿಂತು ಹರಕೆ ಸಮರ್ಪಣೆ ಮಾಡಿದರು. ಸ್ನಾನ ಮಾಡಿ ಮಡಿಯಾಗಿ ಧೂಪ-ಕರ್ಪೂರ ಹಚ್ಚಿ, ಹೂ, ಹಣ್ಣು, ಕಾಯಿ ಸಮರ್ಪಿಸಿ ದೇವರ ದರ್ಶನ ಪಡೆದರು. ಈ ಪವಿತ್ರ ದಿನದಲ್ಲಿ ಒಕ್ಕಲಿಗೆ ಸೇರಿದ ಕುಟುಂಬದ ಹಿರಿಯ ಮಗನಿಗೆ ನೀಲಗಾರನ ದೀಕ್ಷೆ ನೀಡುವುದು, ಹೊನ್ನಹುತ್ತ ಮಂಟಪದ ಬಳಿ ಮಣಿಧಾರಣೆ ಮಾಡುವುದು ವಾಡಿಕೆ. ಅದರಂತೆ ವಿಧಿ- ವಿಧಾನಗಳು ನೆರವೇರಿದವು.

ಉರುಳು ಸೇವೆ:ಮುಡಿಸೇವೆಗೂ ಮುನ್ನ ಸಾವಿರಾರು ಮಹಿಳೆಯರು, ಪುರುಷರು, ಮಕ್ಕಳು ಸೇರಿ ಸಿದ್ದಪ್ಪಾಜಿ ಗದ್ದುಗೆ ಸುತ್ತಲೂ ಉರುಳು ಸೇವೆ ಮಾಡಿದರು.

ಗದ್ದುಗೆಗೆ ಪೂಜೆ : ಬುಧವಾರ ರಾತ್ರಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರು ಗದ್ದುಗೆಗೆ ಪೂಜೆ ಸಲ್ಲಿಸಿದರು. ದೇವಾಲಯದ ಮುಂದೆ ವಿವಿಧ ಹೂಗಳಿಂದ ಅಲಂಕರಿಸಿ, ಸರ್ಪವಿರುವ ರುದ್ರಾಕ್ಷಿ ಲಿಂಗ ಪ್ರತಿಷ್ಠಾಪನೆ ಮಾಡಿ ಸಿದ್ಧಪಡಿಸಿದ್ದ ರುದ್ರಾಕ್ಷಿ ಮಂಟಪಕ್ಕೆ ಪೂಜೆ ಸಲ್ಲಿಸಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ, ದೇವಾಲಯವನ್ನು ಮೂರು ಸುತ್ತು ಉತ್ಸವ ಮೂರ್ತಿ ಸಹಿತ ಪ್ರದಕ್ಷಿಣೆ ಮಾಡಿದರು. ಸಾವಿರಾರು ನೀಲಗಾರರು ಜಗಾಟೆ, ಡೊಳ್ಳು, ತಮಟೆ, ಕಂಸಾಳೆ, ಸದ್ದಿನಲ್ಲಿ ಕುರುಬನಕಟ್ಟೆ ಚೆನ್ನಯ್ಯ-ಲಿಂಗಯ್ಯ ಕಂಡಾಯಗಳು, ಸತ್ತಿಗೆ, ಸೂರಾಪಾನಿ, ಛತ್ರಿ, ಚಾಮರಗಳ ಸಮೇತ ಉತ್ಸವ ನೆರವೇರಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net