

ಕೊಳ್ಳೇಗಾಲ: ಐತಿಹಾಸಿಕ ಕ್ಷೇತ್ರ ಚಿಕ್ಕಲ್ಲೂರು ಶ್ರೀ ಘನನೀಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಜ.25ರಿಂದ 5 ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಜಾತ್ರೆಯ ಪೂರ್ವ ಸಿದ್ಧತೆ ಪರಿಶೀಲಿಸಿದರು.
ಚಿಕ್ಕಲ್ಲೂರಿನ ಶ್ರೀ ಕ್ಷೇತ್ರದ ಹೊಸ ಮಠ, ಹಳೇ ಮಠ ಮತ್ತು ಶ್ರೀ ಸಿದ್ದಪ್ಪಾಜಿ ಗದ್ದುಗೆ ಇರುವ ದೇವಾಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು. ಈ ವೇಳೆ ಮಳ್ಳವಳ್ಳಿ ಮಠದ ಪೀಠಾಧ್ಯಕ್ಷ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ಅವರಿಗೆ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಿ, ಹಾಗೆಯೇ ಮಠದಿಂದ ಸ್ವಚ್ಛತೆ ಹಾಗೂ ಶೌಚಗೃಹ, ಸ್ನಾನಗೃಹ ವ್ಯವಸ್ಥೆಯನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ತಿಳಿಸಿದರು.
ಜ.24ರಂದು ರಾತ್ರಿ ನಡೆಯುವ ಚಂದ್ರಮಂಡಲೋತ್ಸವಕ್ಕೆ ಸಹಸ್ರಾರು ಭಕ್ತರು ಬರುವುದರಿಂದ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡುವ ಸಲುವಾಗಿ ಚಂದ್ರಮಂಡಲ ಬಗ್ಗೆ ಮಠದವರಿಂದ ಮಾಹಿತಿ ಪಡೆದರು. ಜಾತ್ರೆಗೆ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಪೊಲೀಸ್ ಚೆಕ್‌ಪೋಸ್ಟ್‌ಗಳು ಹಾಗೂ ಏಕಮುಖ ಸಂಚಾರದ ಬಗ್ಗೆ ತಮ್ಮ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಸ್ಥಳದಲ್ಲಿದ್ದ ಡಿವೈಎಸ್ಪಿ ಸೋಮೇಗೌಡ ಅವರಿಗೆ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರ ಸುರಕ್ಷತೆ ದೃಷ್ಟಿಯಿಂದ ಏನೆಲ್ಲ ಕ್ರಮವಹಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಗಣೇಶ್ ಹಾಗೂ ಸಿಬ್ಬಂದಿ ಇದ್ದರು.