ಭಕ್ತರ ಮನದಲ್ಲಿ ನೆಲೆಸಿರುವ ಶ್ರೀ ಸಿದ್ದಪ್ಪಜ್ಜ, ಉಣಕಲ್ಲ ನೂತನ ಶಿಲಾಕಟ್ಟಡ ವೀಕ್ಷಿಸಿದ ಶ್ರೀಶೈಲ ಜಗದ್ಗುರು ಹೇಳಿಕೆ

IMG-20250214-WA0014.jpg
Published on

ಹುಬ್ಬಳ್ಳಿ: ಮಹಾತ್ಮರ ಸಿದ್ಧಿಯು ದೇಹ ತ್ಯಜಿಸಿದ ನಂತರವೂ ಶಕ್ತಿಯಾಗಿ ವಿಜೃಂಭಿಸುತ್ತದೆ ಎಂದು ಯೋಗಶಾಸ್ತ್ರ ಹೇಳುತ್ತದೆ. ಅಂತಹ ತಪಃಶಕ್ತಿಯಿಂದಾಗಿ ಸಿದ್ದಪ್ಪಜ್ಜನವರು ಭಕ್ತರ ಮನದಲ್ಲಿ ಇಂದಿಗೂ ನೆಲೆಸಿದ್ದಾರೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿಯ ಉಣಕಲ್ಲ ಪಿ.ಬಿ. ರಸ್ತೆ ಬಳಿಯ ಶ್ರೀ ಸದ್ಗುರು ಸಿದ್ದೇಶ್ವರ ಸ್ವಾಮಿ ಹೊಸಮಠದ ನೂತನ ಶಿಲಾ ಕಟ್ಟಡದ ಕಾಮಗಾರಿಯನ್ನು ಶುಕ್ರವಾರ ವೀಕ್ಷಣೆ ಮಾಡಿದ ನಂತರ ಅವರು ಆಶೀರ್ವಚನ ನೀಡಿದರು.

ಸಿದ್ದಪ್ಪಜ್ಜನ ವೈಭವ, ಲೀಲೆಗಳನ್ನು ಕೇಳಿ ಬಹಳ ಸಂತೋಷವಾಯಿತು. ಅವರು ಆಧ್ಯಾತ್ಮಿಕ ಸಾಧನೆ ಮಾಡಿ ಮಹಾತ್ಮರಾದವರು. ಜೀವಾತ್ಮ- ಪರಮಾತ್ಮನ ಮಧ್ಯದ ಅವಸ್ಥೆಯಲ್ಲಿದ್ದುಕೊಂಡು ಭಕ್ತರಿಗೆ ವಿಶೇಷ ಎನಿಸಿದರು. ಅವರ ಮಠ ಕಟ್ಟುವ ಮೂಲಕ ಭಕ್ತಿಯಿಂದ ಧ್ಯಾನಿಸಿ ಇಷ್ಟಾರ್ಥ ಈಡೇರಿಸಿಕೊಳ್ಳುತ್ತಿರುವುದು ದೈವಿ ಶಕ್ತಿಗೆ ಸಾಕ್ಷಿ ಎಂದರು.

ಶ್ರೀಶೈಲವು ಭವ್ಯ, ದಿವ್ಯವಾದ ಧಾರ್ಮಿಕ ಕ್ಷೇತ್ರವಾಗಿದೆ. ಭೂಮಿಯ ಮಧ್ಯಭಾಗವಾಗಿದೆ (ನಾಭಿ ಕ್ಷೇತ್ರ). ಅಲ್ಲಿಗೆ ಬರುವ ಭಕ್ತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಶ್ರೀಮಲ್ಲಿಕಾರ್ಜುನ, ಭ್ರಮರಾಂಬಿಕ ಹಾಗೂ ಪಂಚಪೀಠಗಳಲ್ಲಿ ಒಂದಾದ ಸೂರ್ಯಸಿಂಹಾಸನ ಹೀಗೆ ಮೂರು ಪೀಠಗಳ ತ್ರಿವೇಣಿ ಸಂಗಮವಾಗಿದೆ. ಭಕ್ತರ ಅನುಕೂಲಕ್ಕಾಗಿ ಕೊಠಡಿಗಳ ನಿರ್ಮಾಣ, ಕಂಬಿ ಮಂಟಪ, ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ಭಕ್ತ ಮಂಡಳಿ ಅಧ್ಯಕ್ಷ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕ ಮಾತನಾಡಿ, ಭಕ್ತರು ನೀಡಿದ ದೇಣಿಗೆಯಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನೊಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಗ್ರಾಮದ ಶಿವಾಜಿ ಕನ್ನಿಕೊಪ್ಪ, ರಾಮಣ್ಣ ಪದ್ಮಣ್ಣವರ, ರಾಮಣ್ಣ ಕೊಕಾಟಿ, ಗುರುಸಿದ್ದಪ್ಪ ಮೆಣಸಿನಕಾಯಿ, ಸಿ.ಬಿ. ಮರಿಗೌಡ್ರ, ಎಂ.ಎಸ್. ಚಿಕ್ಕಮಠ, ಜಯಮ್ಮತಾಯಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net