

ನರಗುಂದ: ಬ್ರಿಟಿಷ್ ಸರ್ಕಾರದಲ್ಲಿ ಸಚಿವರಾಗಿ 7 ವಿವಿಧ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿರುವ ಸರ್. ಸಿದ್ದಪ್ಪ ಕಂಬಳಿ ಅವರು ಉತ್ತರ ಕರ್ನಾಟಕದಲ್ಲಿ ಅಕ್ಷರ ಜ್ಯೋತಿ ಪ್ರಜ್ವಲಿಸುವಂತೆ ಹೋರಾಡಿದ್ದಾರೆ. ಬಡವರ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿರುವ ಅವರ ಸೇವೆ ಅನನ್ಯವಾದುದು ಎಂದು ಚಿಂತಕ ರವೀಂದ್ರನಾಥ ಡೊಡ್ಡಮೇಟಿ ಹೇಳಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚೆಂಬೆಳಕು ಚೆಲ್ಲಿದವರು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉತ್ತರ ಕರ್ನಾಟಕದ ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಧಾರವಾಡದಲ್ಲಿ ಕರ್ನಾಟಕ ಕಾಲೇಜ್ ಸ್ಥಾಪಿಸಿದರು. ಶೋಷಿತರ, ಅಸ್ಪಶ್ಯರ ಪರವಾಗಿ ನಿಂತ ಸರ್ ಸಿದ್ದಪ್ಪ ಕಂಬಳಿಯವರು ಮಹಾರಾಷ್ಟ್ರದ ಜ್ಯೋತಿಬಾ ಫುಲೆ ಅವರಂತೆ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದರು. ಅವರು ಕರುನಾಡಿಗೆ ನೀಡಿರುವ ಕೊಡುಗೆ ಅಪಾರ. ಕನ್ನಡದ ನಾಡು-ನುಡಿಯ ಮೇಲೆ ಅಪಾರವಾದ ಅಭಿಮಾನ ಹೊಂದಿದ್ದ ಅವರು ಮುಂಬೈ ವಿಧಾನಸಭೆಯಲ್ಲಿ ಏಕೀಕರಣ ಹೋರಾಟಗಾರ ಅಂದಾನಪ್ಪ ದೊಡ್ಡಮೇಟಿ ಅವರು ಕನ್ನಡದಲ್ಲಿ ಮಾತನಾಡಿದಾಗ ಅವರ ಬೆನ್ನು ತಟ್ಟಿ ಬೆಂಗಾವಲಾಗಿ ನಿಂತಿದ್ದರು. ಮುಂಬೈ ಸರ್ಕಾರದಲ್ಲಿ ಮಂತ್ರಿಯಾದ ಮೊದಲ ಕನ್ನಡಿಗ ಸರ್. ಸಿದ್ದಪ್ಪ ಕಂಬಳಿ ಎಂಬುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ಮಹಾಂತೇಶ ಹಿರೇಮಠ, ದುರಗಪ್ಪ ಬಂಡೆನ್ನವರ ಉಪಸ್ಥಿತರಿದ್ದರು.