

ಗೋಣಿಕೊಪ್ಪ: ಯರವ ಸಮಾಜದ ಅಧ್ಯಕ್ಷರಾಗಿ ತಿತಿಮತಿ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕ ಪಿ.ಕೆ.ಸಿದ್ದಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಂಗಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸೋಮವಾರ ನಡೆದ ಯರವ ಸಮಾಜದ ಪದಾಧಿಕಾರಿಗಳ ಸಭೆಯಲ್ಲಿ ಸಮಾಜದ ಮುಖಂಡರು ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಉಪಾಧ್ಯಕ್ಷರಾಗಿ ಪಿ.ಎಂ.ರಘು, ಕಾರ್ಯದರ್ಶಿಯಾಗಿ ಪಿ.ಎಸ್.ಪ್ರಸನ್ನ, ಉಪಕಾರ್ಯದರ್ಶಿಯಾಗಿ ಪಿ.ಟಿ.ಪವಿ, ಖಜಾಂಚಿಯಾಗಿ ಪಿ.ಎ.ದಿನೇಶ್ ಹಾಗೂ ನಿತೀನ್, ಕ್ರೀಡಾ ಸಂಚಾಲಕರಾಗಿ ಪಿ.ಎಂ.ಪ್ರವೀಣ್, ಪಿ.ಆರ್.ಸಂತೋಷ್ ಆಯ್ಕೆ ಮಾಡಲಾಯಿತು. ಉಳಿದಂತೆ ಸಮಾಜದ ಸದಸ್ಯರಾಗಿ ಪಿ.ಎನ್.ಕಾಳ, ಪಿ.ಎಂ.ವಿನು, ಪಿ.ಎಂ.ಗಣೇಶ್, ರಾಚಪ್ಪ, ಪ್ರಶಾಂತ್, ಅಶೋಕ್, ರೂಪೇಶ, ಶಶಿ, ಮಲ್ಲಪ್ಪ ಹಾಗೂ ರವಿ ಆಯ್ಕೆಯಾದರು.
ಸಮಾಜದ ವತಿಯಿಂದ ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿರುವ ಯರವ ಕ್ರಿಕೆಟ್ ಕ್ರೀಡೋತ್ಸವದ ಬಗ್ಗೆ ಹಲವು ಪದಾಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿದರು. ಮೇ 1ರಿಂದ 5ರವರೆಗೆ ತಿತಿಮತಿಯ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಯರವ ಕ್ರಿಕೆಟ್ ಹಬ್ಬವನ್ನು ಯಶಸ್ವಿಯಾಗಿ ನಡೆಸಲು ಸಮಿತಿ ತೀರ್ಮಾನಿಸಲಾಯಿತು.
ನೂತನ ಅಧ್ಯಕ್ಷ ಪಿ.ಕೆ.ಸಿದ್ದಪ್ಪ ಅಧಿಕಾರ ಸ್ವೀಕರಿಸಿ ಮಾತನಾಡಿ, ಯರವ ಸಮಾಜವು ಕೇವಲ ವಾರ್ಷಿಕವಾಗಿ ನಡೆಯುವ ಕ್ರೀಡೋತ್ಸವಕ್ಕೆ ಸೀಮಿತಗೊಳ್ಳದೆ ಸಮಾಜದವರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು. ಸರ್ಕಾರದ ಯೋಜನೆಗಳನ್ನು ಆದಿವಾಸಿಗಳಿಗೆ ಸರಿಯಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನತೆಗೆ ಜಾಗೃತಿ ಮೂಡಿಸಬೇಕು. ಯರವ ಸಮುದಾಯದಲ್ಲಿ ವಿದ್ಯಾವಂತರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸಮಾಜದಿಂದ ಮುಂದಿನ ದಿನದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.